ಕುಶಾಲನಗರ ಏ.27 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಕುಶಾಲನಗರ ವ್ಯಾಪ್ತಿಯ ಮಿಂಚಿನ ಸಂಚಾರ ನಡೆಸಿ, ಮತದಾರರನ್ನು ಭೇಟಿಯಾಗಿ ಬಿರುಸಿನ ಚುನಾವಣಾ ಮತಯಾಚನೆ ಕಾರ್ಯ ನಡೆಸಿದರು.
ಮೈಸೂರು-ಕುಶಾಲನಗರ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿ ಬಳಿಯಿಂದ ಸಭೆಯ ಬಳಿಕ ಕಾರ್ಯಕರ್ತರೊಂದಿಗೆ ಪ್ರಚಾರ ಆರಂಭಿಸಿದ ಮುತ್ತಪ್ಪ, ನಗರದ ವಿವಿಧ ಕಡೆಗಳಿಗೆ ತೆರಳಿ ಮತ ಪ್ರಚಾರ ಮಾಡಿದರು.
ಈ ಸಂದರ್ಭ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗುಡಿಸಲು ಮುಕ್ತ ಜಿಲ್ಲೆಯನ್ನಾಗಿ ಪರಿವರ್ತಿಸಲು ಉದ್ದೇಶಿಸಿರುವುದನ್ನು ತಮ್ಮೊಂದಿಗೆ ಹೇಳಿದ್ದಾರೆಂದು ಮುತ್ತಪ್ಪ ತಿಳಿಸಿದರು.
ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಯನ್ನು ಯಾವುದೇ ನಿಬಂಧನೆಗಳಿಲ್ಲದೆ ಜಾರಿಗೆ ತರಲಿದೆ. ಜೆಡಿಎಸ್ ಪಕ್ಷವು ಕ್ಷೇತ್ರದಲ್ಲಿ ಬಲಿಷ್ಠವಾಗಿದ್ದು, ಈ ಬಾರಿ ಗೆಲುವು ಸಾಧಿಸಲಿದೆ ಎಂದರು.
ಕೊಡಗಿನಲ್ಲಿ ಉತ್ತಮ ಪರಿಕಲ್ಪನೆಯೊಂದಿಗೆ ಅತ್ಯಾಧುನಿಕ ರೀತಿಯ ವೈಜ್ಞಾನಿಕ ರೂಪುರೇμÉಗಳನ್ನು ಒಳಗೊಂಡ ಯೋಜನೆಗಳನ್ನು ಜಾರಿಗೆ ತರುವುದೇ ನಮ್ಮ ಮೊದಲ ಆದ್ಯತೆ ಆಗಿದ್ದು, ಬದ್ಧತೆ ಇಲ್ಲದ ರಾಷ್ಟ್ರೀಯ ಪಕ್ಷಗಳಿಗೆ ಜನ ತಕ್ಕ ಪಾಠ ಕಲಿಸಲಿದ್ದು, ಈ ಬಾರಿ ಪ್ರಾದೇಶಿಕ ಪಕ್ಷದ ಕೈ ಹಿಡಿಯುವುದು ಖಚಿತ ಎಂದು ಹೇಳಿದರು.
ಪ್ರಚಾರದ ವೇಳೆ ಕುಶಾಲನಗರ ನಗರ ಜೆಡಿಎಸ್ ಅಧ್ಯಕ್ಷ ಚಂದ್ರು, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ಜಗದೀಶ್, ಜೆಡಿಎಸ್ ಮಹಿಳಾ ಘಟಕದ ಕಾರ್ಯಕರ್ತರು ಇದ್ದರು.
ದೀಪ ಮುತ್ತಪ್ಪ ಪ್ರಚಾರ : ಮಡಿಕೇರಿ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರ ಪತ್ನಿ ದೀಪ ಮುತ್ತಪ್ಪ ಅವರು ಕುಶಾಲನಗರ ತಾಲ್ಲೂಕಿನ ಶಿರಂಗಾಲ, ತೊರೆನೂರು, ಯಡವನಾಡು, ಹುದುಗೂರು ಮತ್ತಿತರ ಕಡೆಗಳಲ್ಲಿ ಪತಿ ನಾಪಂಡ ಮುತ್ತಪ್ಪ ಪರ ಮತಯಾಚನೆ ಮಾಡಿದರು.









