ಮಡಿಕೇರಿ ಏ.27 : ಕ್ರೀಡೆಯಲ್ಲಿ ಶಿಸ್ತು ಮುಖ್ಯವಾಗಿದ್ದು, ಶ್ರಮಪಟ್ಟರೆ ಖಂಡಿತಾ ಪ್ರತಿಫಲ ಸಿಗಲಿದೆ ಎಂದು ರಾಷ್ಟ್ರೀಯ ಡೆಕಥ್ಲಾನ್, ಹಾಕಿ ಹಾಗೂ ಕ್ರಿಕೆಟ್ ಆಟಗಾರ ಕೋದಂಡ ಪೂವಯ್ಯ ಹೇಳಿದರು.
ವಾಂಡರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ಮರಣಾರ್ಥ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉಚಿತ ಬೇಸಿಗೆ ಕ್ರೀಡಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಧನೆ ಮಾಡಲು ಯಾವುದೇ ಮಿತಿ ಇರುವುದಿಲ್ಲ, ಕಷ್ಟಪಟ್ಟರೆ ಪ್ರಯೋಜನ ಸಿಗಲಿದೆ. ಕ್ರೀಡೆಯಲ್ಲಿ ಶ್ರಮಪಟ್ಟರೆ ಯಶಸ್ಸು ಸಿಗಲಿದೆ. ಕ್ರೀಡಾಪಟುಗಳಿಗೆ ದೈಹಿಕ ಸಾಮಥ್ರ್ಯ ಇರಬೇಕು. ಮೇಲಾಟಗಳಲ್ಲಿ(ಅಥ್ಲೆಟಿಕ್) ತೊಡಗಿಸಿಕೊಂಡವರಿಗೆ ಯಾವುದೇ ಕ್ರೀಡೆಯಲ್ಲೂ ಭಾಗವಹಿಸಬಹುದು. ಮೇಲಾಟಗಳು ಕ್ರೀಡೆಯ ತಾಯಿ ಇದ್ದಂತೆ ಎಂದು ಹೇಳಿದರು. ಇದು ನಿಮಗಳಿಗೆ ಕಲಿಯಲು ಸರಿಯಾದ ಸಮಯವಾಗಿದ್ದು, ತರಬೇತುದಾರರು ಹೇಳಿಕೊಡುವುದನ್ನು ಆಸಕ್ತಿಯಿಂದ ಕೇಳಿ ತಿಳಿದುಕೊಳ್ಳಬೇಕು. ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದಲ್ಲಿ ಏನನ್ನೂ ಸಾಧಿಸಲಾಗದು. ಎಲ್ಲರಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಹೊರಗೆಡಹಲು ಇದು ಸದವಕಾಶವಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಕ್ಕಳಿಗೆ ಕರೆ ನೀಡಿದರು.
ಮಕ್ಕಳು ಕುರುಕಲು ಆಹಾರವನ್ನು ಸೇವಿಸದೇ ಮನೆಯಲ್ಲಿ ಮಾಡಿಕೊಡುವ ಪೌಷ್ಠಿಕ ಆಹಾರ, ಹಣ್ಣು ಮುಂತಾದುವುಗಳನ್ನು ಸೇವಿಸಬೇಕು. ಯಾವುದೇ ಕ್ಷೇತ್ರದಲ್ಲಾಗಲೀ ಸಿಕ್ಕ ಅವಕಾಶದಲ್ಲಿ ಜೀವನವನ್ನು ಆನಂದಿಸುವಂತೆ ಕಿವಿಮಾತು ಹೇಳಿದರು.
ವಾಂಡರ್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ, ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರು, ಪೋಷಕರು ಇದ್ದರು.









