ಮಡಿಕೇರಿ ಏ.27 : ಉರಿ ಬಿಸಿಲ ಬೇಗೆಯಿಂದ ಬಳಲಿದ್ದ ನಗರದ ಜನತೆಗೆ ನೆಮ್ಮದಿಯನ್ನು ತರುವಂತೆ, ಗುರುವಾರ ಸಂಜೆ ಮಳೆ ಸುರಿದು ವಾತಾವರಣಕ್ಕೆ ತಂಪನ್ನೆರಚಿತು.
ಫೆಬ್ರವರಿಯಲ್ಲಿ ಬಂದ ಅಲ್ಪ ಪ್ರಮಾಣದ ಮಳೆ ಬಿಟ್ಟರೆ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಕೇಂದ್ರಕ್ಕೆ ಹನಿ ಮಳೆಯಾಗಿರಲಿಲ್ಲ. ಇಂದು ಮಧ್ಯಾಹ್ನ ನಿಧಾನವಾಗಿ ಕವಿದ ಮೋಡ, ಸಂಜೆ ಸುಮಾರು ಅರ್ಧಗಂಟೆಗಳ ಕಾಲ ಸುರಿಸಿದ ಮಳೆ ಬಿಸಿಲ ಬೇಗೆಯನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಿತು.
ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ವರ್ಷಂಪ್ರತಿ ಸುರಿಯುತ್ತಿದ್ದ ಮಳೆ ಈ ಬಾರಿ ಕೈಕೊಟ್ಟ ಪರಿಣಾಮ, ಏಪ್ರಿಲ್‍ನಲ್ಲಿ ಮಡಿಕೇರಿಯ ತಾಪಮಾನ 35 ಡಿಗ್ರಿ ಆಸುಪಾಸಿಗೆ ತಲುಪುವ ಮೂಲಕ ಬಿಸಿಲ ಬೇಗೆಗೆ ಜನತೆ ಕಂಗಾಲಾಗಿದ್ದರು. ಇಂದು ಸುರಿದ ಮಳೆ ಬಿಸಿಲ ವಾತಾವರಣದ ನಡುವೆ ಒಂದಷ್ಟು ತಂಪನ್ನು ನೀಡಿ ನಗರದ ಜನತೆಗೆ ಸಂತಸವನ್ನು ಉಂಟುಮಾಡಿದೆ.








