ಸೋಮವಾರಪೇಟೆ ಏ.28 : ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.
ದೊಡ್ಡಮನೆಕೊಪ್ಪ, ಊರೊಳಕೊಪ್ಪ, ಸಿಂಗನಳ್ಳಿ, ನಡ್ಲಕೊಪ್ಪ, ಇನಕನಹಳ್ಳಿ, ಹರಪಳ್ಳಿ, ವಣಗೂರುಕೊಪ್ಪ, ಶುಭಾಷ್‍ನಗರ, ಕರಡಿಕೊಪ್ಪ, ದೊಡ್ಡತೋಳೂರು, ಚಿಕ್ಕತೋಳೂರು, ಗ್ರಾಮಗಳ ವ್ಯಾಪ್ತಿಗೆ ಒಳಪಡುವ ನಿವಾಸಿಗಳು ಸುಗ್ಗಿ ಉತ್ಸವದಲ್ಲಿ ದೇವಿಗೆ ಮಡೆ ಅರ್ಪಿಸುವ ಮೂಲಕ ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸುಗ್ಗಿ ಕುಣಿತದ ತಂಡದಿಂದ ಸುಗ್ಗಿ ಕುಣಿತ ನಡೆದರೆ, ಇನ್ನೊಂದೆಡೆಯಲ್ಲಿ ಮಕ್ಕಳು, ಪುರುಷರು, ಮಹಿಳೆಯರು ಸಂಪ್ರಾದಾಯದಂತೆ ಸುಗ್ಗಿ ಕುಣಿತದಲ್ಲಿ ಪಾಲ್ಗೊಂಡರು.
ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಸುಗ್ಗಿ ಕಟ್ಟೆಯ ಮುಖ್ಯ ರಂಗಕ್ಕೆ ಪ್ರದಕ್ಷಿಣೆ ಹಾಕಲಾಯಿತು. ಹರಕೆ ಮಾಡಿಕೊಂಡ ಭಕ್ತರು ಈಡುಗಾಯಿ ಸೇವೆ ಅರ್ಪಿಸಿದರು.
ಮಹಿಳೆಯರು, ಮಕ್ಕಳು, ಹಿರಿಯರು ಉತ್ಸವದಲ್ಲಿ ಭಾಗವಹಿಸಿ ಇಷ್ಟಾರ್ಥಗಳ ನೆರವೇರಿಕೆಗೆ ಪ್ರಾರ್ಥಿಸಿದರು.
ಕುಟುಂಬ ಸಮೇತ ತವರಿನ ಸುಗ್ಗಿಯಲ್ಲಿ ಭಾಗವಹಿಸುವುದು, ಗ್ರಾಮದ ಹೆಣ್ಣುಮಕ್ಕಳಿಗೆ ವಿಶೇಷ ದಿನ. ಈ ಭಾಗದಿಂದ ಮದುವೆಯಾಗಿ ಹೋದ ಹೆಣ್ಣು ಮಕ್ಕಳು ತವರಿನ ಸುಗ್ಗಿಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು.
ಪ್ರಧಾನ ಅರ್ಚಕರಾದ ಡಿ.ಎನ್. ಸುಧಾಕರ, ಡಿ.ಎಂ. ದಿಲೀಪ, ಟಿ.ಕೆ.ಶಿವಕುಮಾರ್ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಉದಯ ಕುಮಾರ್, ಬಿ.ಸಿ.ನವೀನ್, ಧರ್ಮಪ್ಪ, ಎಸ್.ಟಿ.ಸೋಮಪ್ಪ, ವಿರೇಶ್, ಎಸ್.ಎಂ.ಪ್ರಭಾಕರ್, ಕೌಶಿಕ್, ಪರಮೇಶ್ ದೇವಿಯ ಸೇವಾ ಕಾರ್ಯ ಮಾಡಿದರು.
ಸುಗ್ಗಿ ಉತ್ಸವ ಸಮಿತಿ ಅಧ್ಯಕ್ಷ ಡಿ.ಎನ್.ರಾಜಗೋಪಾಲ್, ಕಾರ್ಯದರ್ಶಿ ಜಗದೀಶ, ಖಜಾಂಚಿ ಮನೋಹರ್ ಸುಗ್ಗಿ ಉತ್ಸವದ ನೇತೃತ್ವ ವಹಿಸಿದ್ದರು.
ಶಾಸಕ ಅಪ್ಪಚ್ಚು ರಂಜನ್, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಪ್ರಮುಖರಾದ ದಿವ್ಯ ಮಂತರ್ ಗೌಡ ಮತ್ತಿತರರು ದೇವಿಗೆ ಪೂಜೆ ಸಲ್ಲಿಸಿದರು.