ಮಡಿಕೇರಿ ಏ.28 : ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಾಗಲು ಕೊಡಗು ಜಿಲ್ಲೆಯ ಎಲ್ಲಾ ಪ್ರವಾಸಿತಾಣಗಳನ್ನು ಮೇ 10 ರಂದು ಬಂದ್ ಮಾಡಬೇಕೆಂದು ಕೊಡಗು ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಕೊರವೇ ಅಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ, ಮತದಾರರು ಚುನಾವಣೆ ಬಗ್ಗೆ ತಾತ್ಸಾರ ಮನೋಭಾವ ತೋರಿ ಪ್ರವಾಸಿತಾಣಗಳೆಡೆಗೆ ಮುಖ ಮಾಡುವುದನ್ನು ತಪ್ಪಿಸಲು ಒಂದು ದಿನ ಬಂದ್ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಕೊಡಗು ಜಿಲ್ಲೆ ಮಾತ್ರವಲ್ಲದೆ ಇತರ ಜಿಲ್ಲೆಗಳಲ್ಲೂ ದಾಖಲೆ ಪ್ರಮಾಣದ ಮತ ಚಲಾವಣೆಯಾಗಬೇಕು. ಮತದಾನ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಅಸ್ತçವಾಗಿದೆ. ಕೊಡಗು ಜಿಲ್ಲೆಯಲ್ಲಿ ಅತ್ಯಧಿಕ ಮತದಾನವಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಮೇ 10 ರಂದು ಪ್ರವಾಸಿತಾಣಗಳನ್ನು ಬಂದ್ ಮಾಡಲು ಆಡಳಿತ ವ್ಯವಸ್ಥೆ ಕ್ರಮ ಕೈಗೊಂಡಿದೆ. ಇದೇ ಮಾದರಿಯಲ್ಲಿ ಕೊಡಗಿನಲ್ಲಿ ಕೂಡ ಪ್ರವಾಸಿತಾಣಗಳು ಬಂದ್ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಮತ ಚಲಾವಣೆ ಮಾಡದೇ ಇದ್ದರೆ ನಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಮತ್ತು ಗೆದ್ದು ಬಂದವರ ಎದುರು ಸೌಲಭ್ಯಗಳಿಗಾಗಿ ಧ್ವನಿ ಎತ್ತಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಜಿಲ್ಲೆಯ ಪ್ರತಿಯೊಬ್ಬರು ಮತ ಚಲಾವಣೆ ಮಾಡುವ ಮೂಲಕ ಪ್ರಜೆಗಳೇ ಪ್ರಭುಗಳು ಎನ್ನುವುದನ್ನು ಸಾಬೀತು ಪಡಿಸಬೇಕೆಂದು ಪವನ್ ಪೆಮ್ಮಯ್ಯ ಮನವಿ ಮಾಡಿದ್ದಾರೆ.










