ಸೋಮವಾರಪೇಟೆ ಏ.28 : ಮಡಿಕೇರಿ ಕ್ಷೇತ್ರಕ್ಕೆ ಶಾಸಕ ಅಪ್ಪಚ್ಚು ರಂಜನ್ ಅವರ ಕೊಡುಗೆ ಶೂನ್ಯ ಎಂದು ಆರೋಪಿಸಿರುವ ಸೋಮವಾರಪೇಟೆ ನಗರ ಕಾಂಗ್ರೆಸ್, ಅವರಿಗೆ ಸೋಲಿನ ಭೀತಿ ಎದುರಾಗಿದೆ ಎಂದು ಲೇವಡಿ ಮಾಡಿದೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಮಾತನಾಡಿ, ಅಪ್ಪಚ್ಚುರಂಜನ್ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಟೀಕಿಸಿದರು.
ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದ್ದು, ಎಲ್ಲೆಡೆ ಮಂತರ್ ಗೌಡರ ಹೆಸರು ಕೇಳಿ ಬರುತ್ತಿದೆ. ಇದರಿಂದ ಶಾಸಕರು ವಿಚಲಿತರಾಗಿದ್ದಾರೆ ಎಂದರು.
ಕುಡಿಯುವ ನೀರಿನ ಸಮಸ್ಯೆಗೆ ಈವರೆಗೆ ಪರಿಹಾರ ಕಂಡುಹಿಡಿಯಲು ವಿಫಲರಾಗಿದ್ದಾರೆ. ಕಸವಿಲೇವಾರಿ ಸಮಸ್ಯೆ ವಿಪರೀತವಾಗಿದೆ ಅದಕ್ಕೆ ಪರಿಹಾರವೇ ಇಲ್ಲದಂತಾಗಿದೆ. ಕಳೆದ ಹಲವು ವರ್ಷಗಳಿಂದ ಟರ್ಫ್ ಕ್ರೀಡಾಂಗಣ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಅದೇ ಹಣವನ್ನು ವಸತಿ ರಹಿತರಿಗೆ ನಿವೇಶನ ಖರೀದಿಗೆ ಉಪಯೋಗಿಸಬಹುದಿತ್ತು. ಕಳೆದ ಹಲವು ವರ್ಷಗಳಿಂದ ಕಾಮಗಾರಿ ಪೂರ್ಣಗೊಳ್ಳದೆ ಪಾಳುಬಿದ್ದಿರುವ ಶತಮಾನೋತ್ಸವ ಭವನವನ್ನು ಕಣ್ಣೆತ್ತಿಯೂ ನೋಡಲಿಲ್ಲವೆಂದು ಆರೋಪಿಸಿದರು.
ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಪ.ಪಂ ಸದಸ್ಯೆ ಶೀಲಾ ಡಿಸೋಜ ಮಾತನಾಡಿ, ಪಟ್ಟಣದಲ್ಲಿ ಸಮರ್ಪಕವಾಗಿ ಅಭಿವೃದ್ದಿ ಕಾರ್ಯಗಳು ನಡೆಯುತಿಲ್ಲವೆಂದ ಅವರು ನರೋತ್ಹಾನ ಯೋಜನೆಯ ಕಾಮಗಾರಿಯನ್ನು ಶಾಸಕರು ಪರಿಶೀಲಿಸಿ ಸಂಬಂಧಿಸಿದವರಿಗೆ ಸೂಕ್ತ ಆದೇಶ ನೀಡಬೇಕಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಮಂಜುನಾಥ ಹಾಗೂ ಜಾಫರ್ ಉಪಸ್ಥಿತರಿದ್ದರು.









