ಮಡಿಕೇರಿ ಏ.28 : ಬಿಜೆಪಿ ನೇತೃತ್ವದ ಸರಕಾರ ರೈತರ ಆದಾಯವನ್ನು ದ್ವಿಗುಣಗೊಳಿಸಲು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಇದೇ ಕಾರಣದಿಂದ ಇಂದು ಕೃಷಿಕ ವರ್ಗ ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ಕೃಷಿ ಮೋರ್ಚಾದ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 538 ಮನೆಗಳ ನಿರ್ಮಾಣ ಮಾಡಲಾಗಿದ್ದು, ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ಮನೆಗಳಲ್ಲಿ ಶೌಚಾಲಯ ನಿರ್ಮಾಣ, ಆಯಷ್ಠಾನ್ ಭಾರತ್ ಯೋಜನೆಯಡಿ ಆರೋಗ್ಯ ಕಾರ್ಡುಗಳ ವಿತರಣೆ, ಮಳೆಹಾನಿ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದರು.
ಕಳೆದ 8 ವರ್ಷಗಳ ಅವಧಿಯಲ್ಲಿ ಅನ್ನದಾತರ ಜೀವನ ಸುಧಾರಣೆಗೆ ಹಲವಾರು ಕ್ರಮಗಳನ್ನು ನೇರ ನಗದು ಪಾವತಿ ಮೂಲಕ ರೈತರಿಗೆ ಹಣಕಾಸಿನ ನೆರವು ನೀಡಲಾಗಿದೆ. ಜೊತೆಗೆ ಹೆಚ್ಚಿನ ಇಳುವರಿ ಪಡೆಯಲು ಮಣ್ಣಿನ ಪರೀಕ್ಷೆ ಮಾಡಿ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಗಿದೆ.ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಕೇಂದ್ರ ಸರಕಾರದಿಂದ ರೂ.6 ಸಾವಿರ ಮತ್ತು ರಾಜ್ಯ ಸರಕಾರದಿಂದ ರೂ.4 ಸಾವಿರ ಸೇರಿದಂತೆ ಒಟ್ಟು ರೂ.10 ಸಾವಿರ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ 54 ಲಕ್ಷ ಅರ್ಹ ರೈತರಿಗೆ ನೀಡಲಾಗಿದೆ ಎಂದು ನಾಗೇಶ್ ಕುಂದಲ್ಪಾಡಿ ತಿಳಿಸಿದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಯೂರಿಯಾವನ್ನು ಖಾಸಗಿ ಕೈಗಾರಿಕೆಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಕಾಳಸಂತೆಯಲ್ಲಿ ಯೂರಿಯಾದ ಮಾರಾಟವನ್ನು ಕೊನೆಗೊಳಿಸಿ, ರಸಗೊಬ್ಬರಗಳಲ್ಲಿನ ರಾಸಾಯನಿಕ ಅಂಶವನ್ನು ಕಡಿಮೆ ಮಾಡಲು ಮೋದಿ ನೇತೃತ್ವದ ಸರ್ಕಾರವು ಬೇವು ಲೇಪಿತ ಯೂರಿಯಾವನ್ನು ಪರಿಚಯಿಸಿತು. ಇದು ಮಣ್ಣಿನ ಆರೋಗ್ಯವನ್ನು ಸುಧಾರಿಸಿದ್ದಲ್ಲದೆ, ದೇಶದ ರೈತರ ಆದಾಯವನ್ನು ಹೆಚ್ಚಿಸಲು ನೆರವಾಗಿದೆ ಎಂದರು.
ಕಳೆದ ಮೂರು ವರ್ಷಗಳಲ್ಲಿ ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಬ್ಸಿಡಿ ನೀಡಲು ರೂ. 52,950 ಕೋಟಿ ಒದಗಿಸಲಾಗಿದೆ. ರೈತ ಶಕ್ತಿ ಯೋಜನೆಯಡಿ ರೂ. 400 ಕೋಟಿ ಡೀಸೆಲ್ ಸಬ್ಸಿಡಿ ಒದಗಿಸಿದೆ. ಬೀಜ, ರಸಗೊಬ್ಬ ಮತ್ತು ಕೀಟನಾಶಕಗಳನ್ನು ಖರೀದಿಸಲು ಈ ವರ್ಷದ ರಾಜ್ಯ ಬಜೆಟ್ ನಲ್ಲಿ ಭೂಸಿರಿ ಯೋಜನೆಯಡಿ ಪ್ರತಿ ರೈತರಿಗೆ ರೂ. 10 ಸಾವಿರ ಹೆಚ್ಚುವರಿ ಸಹಾಯಧನವನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.
ರೈತರ ಕಲ್ಯಾಣಕ್ಕಾಗಿ ಡಬಲ್ ಇಂಜಿನ್ ಸರ್ಕಾರವು ಹಲವಾರು ಕ್ರಮಗಳನ್ನು ಜಾರಿಗೆ ತಂದಿದ್ದು, ಯಶಸ್ವಿನಿ ಯೋಜನೆ ಮರುಜಾರಿ, ರೈತರು ಭೂರಹಿತ ಕಾರ್ಮಿಕರು ಮತ್ತು ಇತರರ ಮಕ್ಕಳಿಗೆ ರೈತ ವಿದ್ಯಾನಿಧಿ, ಸೇರಿದಂತೆ 2023-24 ರಾಜ್ಯ ಬಜೆಟ್ ನಲ್ಲಿ ರೈತರಿಗೆ ರೂ. 25000 ಕೋಟಿ ಸಾಲವನ್ನು ಘೋಷಿಸಲಾಗಿದೆ ಎಂದರು.
ರಾಜ್ಯದ 8.95 ಲಕ್ಷ ಹಾಲು ಉತ್ಪಾದಕರಿಗೆ ರೂ. 1643.57 ಕೋಟಿ ಪ್ರೋತ್ಸಹ ಧನವನ್ನು ನೇರ ನಗದು ವರ್ಗಾವಣೆ (D.B.T) ಮೂಲಕ ಜಮೆ ಮಾಡಲಾಗಿದ್ದು, ‘ಯಶಸ್ವಿನಿ’ ಯೋಜನೆ ಮರು ಜಾರಿಗೆ ರೂ. 1078,00 ಕೋಟಿ ಕಾಯ್ದಿರಿಸಿದ್ದು, 799 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.
ಅಮೃತ ಮಹೋತ್ಸವದ ಪ್ರಯುಕ್ತ 750 ಗ್ರಾ.ಪಂ ಗಳಲ್ಲಿ ಬೀದಿದೀಪ, ಸೌರ ವಿದ್ಯುತ್, ಕುಡಿಯುವ ನೀರು, ಡಿಜಿಟಲ್ ಲೈಬ್ರರಿ, ಘನತ್ಯಾಜ್ಯ ವಿಂಗಡಣೆ ವಿಲೇವಾರಿ, ಆಶ್ರಯ ರಹಿತರನ್ನು ಗುರುತಿಸಿ ವಸತಿ ಕಲ್ಪಿಸುವ ಯೋಜನೆ, ಅಮೃತ ಆರೋಗ್ಯ ಯೋಜನೆ, ಮೂಲ ಸೌಕರ್ಯ ಉನ್ನತೀಕರಣಕ, ಅಮೃತ `ಶಾಲಾ ಸೌಲಭ್ಯ, ಅಮೃತ ಕೌಶಲ್ಯ ತರಬೇತಿ ನೀಡಲಾಗಿದೆ ಎಂದರು.
ಗ್ರಾಮೋದಯದ ಮೂಲಕ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವಧನವನ್ನ ಹೆಚ್ಚಳಮಾಡಲಾಗಿದ್ದು, ನಾಗರಿಕ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ “ಗ್ರಾಮ ಒನ್” ಪಾರಂಭಿಸಿರುವುದು. ಗ್ರಾಮೀಣ ಜನರ ಅನುಕೂಲಕ್ಕಾಗಿ “ಸಂಚಾರಿ ಪಶು ಅಂಬ್ಯುಲೆನ್ಸ್” ವ್ಯವಸ್ಥೆ ಕಲ್ಪಿಸಲಾಗಿದೆ. ಕೊಡಗಿನಲ್ಲಿ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಹೆಚ್ಚು ಅಂತರದಲ್ಲಿ ಗೆಲವು ಸಾಧಿಸಲಿದ್ದು, ಮತದಾರರು ಸಹಕಾರ ನೀಡುವಂತೆ ನಾಗೇಶ್ ಕುಂದಲ್ಪಾಡಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೃಷಿ ಮೋರ್ಚಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಬೀರ್ ದಾಸ್ ಹಾಗೂ ಪ್ರಮುಖರಾದ ಯಮುನಾ ಚಂಗಪ್ಪ ಉಪಸ್ಥಿತರಿದ್ದರು.