ಮಡಿಕೇರಿ ಏ.29 : ಕೊಡಗು ಗೌಡ ಫುಟ್‍ಬಾಲ್ ಅಸೋಸಿಯೇಶನ್ ಆಶ್ರಯದಲ್ಲಿ ಮರಗೋಡುವಿನಲ್ಲಿ ನಡೆದ ಪಾಣತ್ತಲೆ ಕಪ್ ಫುಟ್ಬಾಲ್ ಅಂಗವಾಗಿ ನಡೆದ ವಿವಾಹಿತ ಮಹಿಳೆಯರ ಮುಕ್ತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಂ 11 ಮಾಲ್ದಾರೆ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ದ್ವಿತೀಯ ಸ್ಥಾನಕ್ಕೆ ಬ್ಲ್ಯಾಕ್ ಪ್ಯಾಂಥರ್ಸ್ ಕಟ್ಟೆಮಾಡು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಫೈನಲ್ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ಮಾಲ್ದಾರೆ ತಂಡ 4 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 58 ರನ್ ಪೇರಿಸಿತು. ಉತ್ತರವಾಗಿ ಆಡಿದ ಕಟ್ಟೆಮಾಡು ತಂಡ ಮೂರು ವಿಕೆಟ್ ಕಳೆದುಕೊಂಡು 48 ರನ್‍ಗಳಿಸಿ 10 ರನ್‍ಗಳ ಅಂತರದಿಂದ ಸೋಲನುಭವಿಸಿತು.
ಉತ್ತಮ ಬ್ಯಾಟ್ಸ್‍ಮೆ ಪ್ರಶಸ್ತಿಯನ್ನು ಮಾಲ್ದಾರೆ ತಂಡದ ಸುಜಿತಾ ಪಡೆದರೆ, ಉತ್ತಮ ಬೌಲರ್ ಪ್ರಶಸ್ತಿಯನ್ನು ಕಟ್ಟೆಮಾಡುವಿನ ಬಿದ್ರುಪಣೆ ಜ್ಯೋತಿ, ಉತ್ತಮ ಆಲ್‍ರೌಂಡರ್ ಹಾಗೂ ಅತಿ ಹೆಚ್ಚು ರನ್‍ಗಳಿಕೆಯ ಪ್ರಶಸ್ತಿಯನ್ನು ಮಾಲ್ದಾರೆಯ ಪ್ರಮೀಳಾ ಹಾಗೂ ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಕಟ್ಟೆಮಾಡುವಿನ ಬಡಕಡ ಶೃಂಗ ಪಡೆದುಕೊಂಡರು.
ಕೊಡಗು ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.
ಕಟ್ಟೆಮನೆ ಸೋನಾಜಿತ್ ನಿರೂಪಿಸಿದರೆ, ಪಾಣತ್ತಲೆ ರಾಯ್ ಸ್ವಾಗತಿಸಿದರು. ಪಾಣತ್ತಲೆ ವಿನಿರಾಯ್ ವಂದಿಸಿದರು.









