ಮಡಿಕೇರಿ ಏ.29 : ಕರ್ನಾಟಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲೇಬೇಕೆನ್ನುವ ಉದ್ದೇಶದಿಂದ ಪಕ್ಷ ಪ್ರಬಲವಾಗಿ ನೆಲೆಯೂರಿರುವ ಕರಾವಳಿ ಕರ್ನಾಟಕ ಭಾಗದಲ್ಲಿ ಇರುವ ಸ್ಥಾನಗಳನ್ನು ಉಳಿಸಿಕೊಳ್ಳುವುದಕ್ಕಾಗಿ ರಾಷ್ಟ್ರ ಮತ್ತು ರಾಜ್ಯ ನಾಯಕರುಗಳ ದಂಡು ಪ್ರಚಾರದಲ್ಲಿ ತೊಡಗಿದೆ.
ಬಿಜೆಪಿಯ ಭದ್ರಕೋಟೆ ಎಂದೇ ಪ್ರತಿಬಿಂಬಿತವಾಗಿರುವ ಕೊಡಗು ಜಿಲ್ಲೆಯ ಇಬ್ಬರು ಅಭ್ಯರ್ಥಿಗಳಾದ ಮಡಿಕೇರಿ ಕ್ಷೇತ್ರದ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ವಿರಾಜಪೇಟೆ ಕ್ಷೇತ್ರದ ಕೆ.ಜಿ.ಬೋಪಯ್ಯ ಅವರುಗಳ ಪರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಡಿಕೇರಿಯಲ್ಲಿ ರೋಡ್ ಶೋ ನಡೆಸಿದರು.
ನಗರದ ಮಾರುಕಟ್ಟೆ ಬಳಿಯ ಶ್ರೀಚೌಡೇಶ್ವರಿ ದೇಗುಲದಿಂದ ಮಧ್ಯಾಹ್ನ 12.44 ಗಂಟೆಗೆ ಆರಂಭಗೊಂಡ ಚುನಾವಣಾ ರೋಡ್ ಶೋ ಜನರಲ್ ತಿಮ್ಮಯ್ಯ ವೃತ್ತದವರೆಗೆ ನಡೆಯಬೇಕಿತ್ತು. ಆದರೆ ಅಮಿತ್ ಶಾ ಅವರು ಉಡುಪಿಗೆ ತೆರಳಬೇಕಾದ ಅನಿವಾರ್ಯತೆ ಇದ್ದ ಕಾರಣ ಹಳೇ ಖಾಸಗಿ ಬಸ್ ನಿಲ್ದಾಣದ ಸ್ಕ್ವಾಡ್ರನ್ ಲೀಡರ್ ದೇವಯ್ಯ ವೃತ್ತದವರೆಗೆ ಮಾತ್ರ ರೋಡ್ ಶೋ ನಡೆಸಿದರು.
ಸುಮಾರು ಅರ್ಧ ಗಂಟೆ ತಡವಾಗಿ ಹೆಲಿಕಾಪ್ಟರ್ನಲ್ಲಿ ನಗರದಂಚಿನ ಗಾಲ್ಫ್ ಮೈದಾನಕ್ಕೆ ಆಗಮಿಸಿದ ಅಮಿತ್ ಶಾ ಅವರು, ನೇರವಾಗಿ ಶ್ರೀ ಚೌಡೇಶ್ವರಿ ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭ ಅವರೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಕೆ.ಜಿ.ಬೋಪಯ್ಯ, ಸಂಸದ ಪ್ರತಾಪ ಸಿಂಹ, ಜಿಲ್ಲಾ ಚುನಾವಣಾ ಉಸ್ತುವಾರಿ ಪ್ರತಾಪ ಸಿಂಹ ನಾಯಕ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಸೇರಿದಂತೆ ಹಲವರು ಹಾಜರಿದ್ದರು.
::: ಕೊಡಗಿನ ಪೇಟದಲ್ಲಿ ಶಾ :::
ಜಿಲ್ಲಾ ಬಿಜೆಪಿ ಪ್ರಮುಖರು ಅಮಿತ್ ಶಾ ಅವರಿಗೆ ಕೊಡಗಿನ ಪೇಟವನ್ನು ತೊಡಿಸಿ ಗೌರವಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ರೋಡ್ ಶೋ ನಡೆಸಿದ ಅಮಿತ್ ಶಾ, ಜನರಿಗೆ ಕೈ ಬೀಸಿ ನಗುಬೀರಿದರು.
ಅಮಿತ್ ಶಾ ಅವರು ಸಾಗಿ ಬಂದ ಹಾದಿಯುದ್ದಕ್ಕೂ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪುಷ್ಪಮಳೆ ಸುರಿಸಿ ಘೋಷಣೆಗಳನ್ನು ಕೂಗಿದರು. ಆದರೆ ಶಾ ಪ್ರಚಾರ ಭಾಷಣ ಮಾಡದೆ ತೆರಳುವ ಮೂಲಕ ಕಾರ್ಯಕರ್ತರಲ್ಲಿ ನಿರಾಶೆ ಮೂಡಿಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ವಾಹನಗಳಲ್ಲಿ ಆಗಮಿಸಿದ ಸಹಸ್ರಾರು ಕಾರ್ಯಕರ್ತರು, ಶ್ರೀ ಚೌಡೇಶ್ವರಿ ದೇಗುಲದ ಬಳಿಯಿಂದ ಮಹದೇವಪೇಟೆಯವರೆಗೆ ಕಿಕ್ಕಿರಿದು ನೆರೆದಿದ್ದರು. ಅಮಿತ್ ಶಾ ಅವರ ಆಗಮನದ ವಿಳಂಬದೊಂದಿಗೆ ಬಿಸಿಲ ಬೇಗೆಯಿಂದ ಬಳಲಿದರು. ಆದರೆ ಸ್ಥಳ ಬಿಟ್ಟು ಕದಲದೆ ಬಿಜೆಪಿ ಪರ ಘೋಷಣೆಗಳನ್ನು ಕೂಗಿದರು.
::: ಅಂಗಡಿಗಳು ಬಂದ್ :::
ಕೇಂದ್ರ್ರ ಗೃಹ ಸಚಿವರ ಆಗಮನದ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದಲೆ ಶ್ರೀ ಚೌಡೇಶ್ವರಿ ದೇಗುಲದಿಂದ ಮಹದೇವಪೇಟೆ, ಖಾಸಗಿ ಬಸ್ ನಿಲ್ದಾಣದ ಆಸುಪಾಸಿನ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಭದ್ರತೆಯ ದೃಷ್ಟಿಯಿಂದ ಮುಚ್ಚಿಸಲಾಗಿತ್ತು ಮತ್ತು ವಾಹನ ಸಂಚಾರಕ್ಕೆ ಮಹದೇವಪೇಟೆಯಲ್ಲಿ ನಿರ್ಬಂಧ ಹೇರಲಾಗಿತ್ತು.
::: ಪೊಲೀಸ್ ಭದ್ರತೆ :::
ಅಮಿತ್ ಶಾ ಭೇಟಿಯ ಹಿನ್ನೆಲೆ ಶ್ರೀ ಚೌಡೇಶ್ವರಿ ದೇವಸ್ಥಾನ ಸೇರಿದಂತೆ ಅವರು ಸಾಗುವ ಹಾದಿಯಲ್ಲಿ ಜಿಲ್ಲಾ ಪೊಲೀಸ್, ಸಿಐಎಸ್ಎಫ್, ಐಟಿಬಿಪಿಯ 600 ಕ್ಕೂ ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು. ಐಜಿ ಪ್ರವೀಣ್ ಮಧುಕರ್ ಪವಾರ್ ಅವರು ಭದ್ರತಾ ವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿದರೆ, ಗೃಹ ಸಚಿವರ ವಿಶೇಷ ರಕ್ಷಣೆಯ ಅಸಿಸ್ಟೆಂಟ್ ಕಮಾಂಡರ್ ಮಹೇಶ್ ಅವರ ಉಸ್ತುವಾರಿಯಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ದೇವಸ್ಥಾನದಲ್ಲಿ ಗೃಹ ಸಚಿವರಿಗೆ ಪೂಜೆಗಾಗಿ ಮಾಡಿಕೊಂಡ ಸಿದ್ಧತೆಗಳು ಭದ್ರತಾ ಸಿಬ್ಬಂದಿಗಳಿಂದ ತಪಾಸಣೆಗೆ ಒಳಪಟ್ಟಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ನೇತೃತ್ವದಲ್ಲಿ ನಗರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
Breaking News
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*