ಮಡಿಕೇರಿ ಏ.29 : ಕೊಡಗು ಹೆಗ್ಗಡೆ ಜನಾಂಗದ 20ನೇ ವರ್ಷದ ಕ್ರೀಡೋತ್ಸವಕ್ಕೆ ಮೂರ್ನಾಡು ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಮೇಜರ್ ಮಳ್ಳಡ ದೀಕ್ಷಿತ್ ದೇವಯ್ಯ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕೊಡಗು ಹೆಗ್ಗಡೆ ಜನಾಂಗದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪರಿಣತರನ್ನುಹೊಂದಿರುವುದು ಉತ್ತಮ ಬೆಳವಣಿಗೆ ಎಂದರು.
ಕ್ರೀಡಾಕೂಟವು ಸೋಲು ಗೆಲುವಿನ ಮಾಪನವಾಗದೆ ಜನಾಂಗದ ಮೇಲಿನ ಅಭಿಮಾನವನ್ನು ವೃದ್ಧಿಸಿ ದೇಶಭಿಮಾನವನ್ನು ಇಮ್ಮಡಿಗೊಳಿಸುವ ಕಾರ್ಯಾಗಾರವಾಗಬೇಕೆಂದು ಕರೆ ನೀಡಿದರು.
ಕೂಡಗು ಅರಣ್ಯ ಅಪರಾಧ ಪತ್ತೆ ದಳದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತುದಿಮಾಡ ಸವಿ ಮಾತನಾಡಿ, ಕೊಡಗಿನಲ್ಲಿ ಕರ್ತವ್ಯದಲ್ಲಿ ಇರುವಾಗ ಮುಖ್ಯ ಮಂತ್ರಿ ಪದಕ ಸಿಕ್ಕುವುದು ಸೌಭಾಗ್ಯವಾಗಿದ್ದು, ಜನಾಂಗ ಬಾಂಧವರು ಶ್ರಮವಹಿಸಿ ಉನ್ನತ ಹುದ್ದೆಗೇರುವುದರೊಂದಿಗೆ ಜಿಲ್ಲೆಯ ಕೀರ್ತಿಯನ್ನು ಉತ್ತುಂಗಕ್ಕೆರಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಮಾತನಾಡಿ ಕ್ರೀಡಾ ಕೂಟದಲ್ಲಿ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತೆ ಕ್ರೀಡಾ ಪಟುಗಳಿಗೆ ಶುಭಕೊರಿದರು.
ಕೊಡಗು ಹೆಗ್ಗಡೆ ಸಮಾಜದ ಕಾರ್ಯದರ್ಶಿ ಚಂಗಚಂಡ ಕಟ್ಟಿಕಾವೇರಪ್ಪ, ಖಜಾಂಚಿ ಪಾನಿಕುಟ್ಟಿರ ಕುಟ್ಟಪ್ಪ, ನಿರ್ದೇಶಕರಾದ ತೊರೇರ ಮುದ್ದಯ್ಯ, ಚರ್ಮಂಡ ಅಪ್ಪುಣು ಪೂವಯ್ಯ, ಮುರೀರ ಕುಶಾಲಪ್ಪ, ಕೊಂಗೆಪಂಡ ರವಿ, ಪದಿಕಂಡ ಸುನಾ, ಕೊಕ್ಕೇರ ಜಗನ್ನಾಥ್, ಚಳಿಯಂಡ ಕಮಲ, ತಂಬಂಡ ಮಂಜುನಾಥ್, ಮಲ್ಲಡ ಸುತಾ, ಪುದಿಯತಂಡ ಜಾಲಿ, ಪ್ರಮುಖರಾದ ಮಳ್ಳಡ ಪೂಣಚ್ಚ, ತೊರೇರ ರಾಜ ಹಾಜರಿದ್ದರು.
ಕೊರಕುಟ್ಟೀರ ಸರ ಚಂಗಪ್ಪ ಸ್ವಾಗತಿಸಿದರು. ಕ್ರೀಡಾ ಸಮಿತಿ ಅಧ್ಯಕ್ಷ ಪಡಿಞರಂಡ ಪ್ರಭುಕುಮಾರ್ ಪ್ರಾಸ್ತಾವಿಕ ನುಡಿಗಳನ್ನಡಿದರು.
ಕಾರ್ಯಕ್ರಮದಲ್ಲಿ 2020ರಲ್ಲಿ ಭಾರತದ ಗಡಿಗೆ ನುಸುಳಿದ ಚೀನಿ ಸೈನಿಕರನ್ನು ಹಿಮ್ಮೆಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಹಾರ್ ರೆಚಿಮೆಂಟಿನ ಮೇಜರ್ ಮಳ್ಳಡ ದೀಕ್ಷಿತ್ ದೇವಯ್ಯ ಮತ್ತು ಮುಖ್ಯಮಂತ್ರಿ ಪದಕ ವಿಜೇತ ಸಬ್ ಇನ್ಸ್‌ಪೆಕ್ಟರ್ ಚಳಿಯಂಡ ತುದಿಮಾಡ ಸವಿ ಲೋಕೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.