ಮಡಿಕೇರಿ ಏ.29 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಹೆಚ್.ಎಂ.ಸೋಮಪ್ಪ ಅವರು ಕ್ಷೇತ್ರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.
ಮಾದಾಪುರ, ಮಡಿಕೇರಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿದ ಸೋಮಪ್ಪ ಹಾಗೂ ಕಾರ್ಯಕರ್ತರು ದುಡಿಯುವ ವರ್ಗದ ನಾಯಕನಿಗೆ ಮತ ನೀಡುವಂತೆ ಮನವಿ ಮಾಡಿದರು. ನಗರದ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಪಕ್ಷದ ಯೋಜನೆಗಳ ಕುರಿತು ಜನರಿಗೆ ಅರಿವು ಮೂಡಿಸಿ ಮತಯಾಚಿಸಿದರು.
ನಂತರ ಮಾತನಾಡಿದ ಸೋಮಪ್ಪ, ಭಾರತೀಯ ಕಮ್ಯೂನಿಸ್ಟ್ ಪಕ್ಷ ಕಳೆದ ಅನೇಕ ವರ್ಷಗಳಿಂದ ಬಡವರ, ಕೂಲಿ ಕಾರ್ಮಿಕರ ಹಾಗೂ ಜನಸಾಮಾನ್ಯರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ಜನರ ಪರವಾಗಿ ಹೋರಾಟ ನಡೆಸಿ ನ್ಯಾಯ ಒದಗಿಸುವ ಪ್ರಯತ್ನ ಮಾಡಿದೆ ಎಂದರು.
ವನ್ಯಜೀವಿ- ಮಾನವ ಸಂಘರ್ಷ, ದುಡಿಯುವ ವರ್ಗದ ಶೋಷಣೆ, ರೈತ ಸಮೂಹಕ್ಕೆ ಆಗುತ್ತಿರುವ ಅನ್ಯಾಯ ನಿಲ್ಲಬೇಕಿದೆ. ಕಾರ್ಮಿಕ ಸಮೂಹದ ಮೂಲಭೂತ ಬೇಡಿಕೆಗಳಿಗೆ ಸೂಕ್ತ ಸ್ಪಂದನ ದೊರಕಬೇಕಾಗಿದೆ. ಈ ಹಿನ್ನೆಲೆ ಸ್ಪರ್ಧೆಗೆ ಇಳಿದಿದ್ದು, ಜನತೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದು, ಸೋಮಪ್ಪ ಅವರ ಪರ ಮತಯಾಚಿಸಿದರು.









