ಮಡಿಕೇರಿ ಮೇ 12 : 2023ನೇ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಚುನಾವಣಾಧಿಕಾರಿಗಳು ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದು ಶ್ರೀ ಕೃಷ್ಣ ಗೋಶಾಲೆಯ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹರೀಶ್ ಜಿ.ಆಚಾರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತಾಗಬೇಕು ಎಂಬ ನಿಟ್ಟಿನಲ್ಲಿ ಮತದಾರರನ್ನು ಆಕರ್ಷಿಸುವ ಸಲುವಾಗಿ ಸ್ವೀಪ್ ಸಮಿತಿ ಸೇರಿದಂತೆ ಜಿಲ್ಲಾಧಿಕಾರಿಗಳು, ಎಡಿಸಿ, ಎಸಿ, ಪೊಲೀಸ್ ಇಲಾಖಾ ಅಧಿಕಾರಿ, ಸಿಬ್ಬಂದಿಗಳು, ಸರಕಾರಿ ನೌಕರರು ನಿರಂತರ ಪ್ರಯತ್ನಗಳನ್ನು ಮಾಡಿದ್ದಾರೆ. ಬಂದೋಬಸ್ತ್ ಕಾರ್ಯದಲ್ಲಿ ಐಟಿಬಿಪಿ, ಸಿಐಎಸ್‍ಎಫ್, ಅರೆ ಸೇನಾಪಡೆಯ ಸಿಬ್ಬಂದಿಗಳು ಹಗಲು ರಾತ್ರಿಗಳ ಪರಿವೆ ಇಲ್ಲದೆ ಕಾರ್ಯನಿರ್ವಹಿಸಿದ್ದಾರೆ. ರಜೆಯ ದಿನಗಳಲ್ಲೂ ಕೂಡ ಚುನಾವಣಾ ಅಧಿಕಾರಿಗಳು, ಸಿಬ್ಬಂದಿಗಳು ಮನೆಗೆ ತೆರಳದೆ ಕೆಲಸ ಮಾಡಿರುವುದು ಕಂಡು ಬಂದಿದೆ. ಜನರಲ್ಲಿ ಮತದಾನದ ಜಾಗೃತಿ ಮೂಡಿಸುವ ಹಲವಾರು ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯವೆಂದು ತಿಳಿಸಿದ್ದಾರೆ.
ಮತ ಪ್ರಚಾರದ ಚುನಾವಣಾ ರ್ಯಾಲಿಗಳು, ನಾಮಪತ್ರ ಸಲ್ಲಿಕೆಯ ಹಂತದಲ್ಲಿ ಅಭ್ಯರ್ಥಿಗಳ ಮೆರವಣಿಗೆ ಸಂದರ್ಭ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕಲ್ಪಿಸಿ, ವಾಹನ ದಟ್ಟಣೆಯನ್ನು ತೆರವುಗೊಳಿಸಿ ಯಾವುದೇ ಪಕ್ಷದ ಕಾರ್ಯಕರ್ತರಿಗೆ, ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಂಡಿರುವುದು ವಿಶೇಷ. ಈ ಎಲ್ಲಾ ಪ್ರಯತ್ನಗಳ ಫಲವೆಂಬಂತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿರುವುದು ಅಭಿನಂದನಾರ್ಹವೆಂದು ಹೇಳಿದ್ದಾರೆ.
ನಾನು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಕೇವಲ ಅನುಭವಕ್ಕಾಗಿ. ಯಾವುದೇ ಪಕ್ಷದ ಅಥವಾ ಅಭ್ಯರ್ಥಿಯ ವಿರುದ್ಧ ಕಣಕ್ಕಿಳಿಯಲಿಲ್ಲ. ಚುನಾವಣೆಗೆ ಸ್ಪರ್ಧಿಸಿದ್ದರಿಂದ ನನಗೆ ವಿಶೇಷ ರಾಜಕೀಯ ಅನುಭವ ದೊರೆತಂತ್ತಾಗಿದೆ ಎಂದು ಹರೀಶ್ ಜಿ.ಆಚಾರ್ಯ ತಿಳಿಸಿದ್ದಾರೆ.
ಚುನಾವಣಾ ಫಲಿತಾಂಶ ಹೇಗೇ ಬರಲಿ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿ ಮತ ಚಲಾಯಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ಚುನಾವಣೆಯಲ್ಲಿ ಗೆಲುವು ಸಾಧಿಸುವವರು ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕ ರೀತಿಯಲ್ಲಿ ಮಾಡಿ ತೋರಿಸಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಚುನಾವಣಾ ಕೆಲಸ ಕಾರ್ಯಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತೋರಿರುವ ಹುಮ್ಮಸ್ಸನ್ನು ದಿನದ ನಾಲ್ಕು ಗಂಟೆ ಸರಕಾರಿ ಕಚೇರಿಗಳಲ್ಲಿ ತೋರಿದಲ್ಲಿ, ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಹರೀಶ್ ಜಿ.ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.