ಮಡಿಕೇರಿ ಮೇ 13 : ಸುದೀರ್ಘ ಅವಧಿಯ ಬಳಿಕ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ತನ್ನ ಅಧಿಪತ್ಯ ಸ್ಥಾಪಿಸಿದ್ದು, ಚುನಾವಣಾ ಮತ ಎಣಿಕೆ ಮುಕ್ತಾಯವಾಗಿ ವಿಜೇತ ಅಭ್ಯರ್ಥಿಗಳ ಘೋಷಣೆಯಾಗುತ್ತಿದ್ದಂತೆ ಮತ ಎಣಿಕಾ ಕೇಂದ್ರದ ಹೊರ ಆವರಣದಲ್ಲಿದ್ದ ನೂರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಹಷೋದ್ಘಾರಗಳನ್ನು ಮಾಡಿ, ವಿಜೇತ ಅಭ್ಯರ್ಥಿಗಳಿಗೆ ಪುಷ್ಪಾಹಾರ ತೊಡಿಸಿ ಸಂಭ್ರಮಿಸಿದರು.
ಮಡಿಕೇರಿ ಕ್ಷೇರತ್ರದಿಂದ ಕಾಂಗ್ರೆಸ್ ಗೆಲುವು ಖಚಿತವಾದ ಬಳಿಕವಷ್ಟೆ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಅವರು ತಮ್ಮ ಪತ್ನಿ ಹಾಗೂ ಕಟುಂಬಸ್ಥರೊಂದಿಗೆ ಮತ ಎಣಿಕಾ ಕೇಂದ್ರಕ್ಕೆ ಆಗಮಿಸಿ ಕಾರ್ಯಕರ್ತರು ಮತ್ತು ಪಕ್ಷದ ಪ್ರಮುಖರೊಂದಿಗೆ ಸಂತಸ ಹಂಚಿಕೊಂಡರು. ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಅವರು ಮತ ಎಣಿಕೆಯ ಸಂದರ್ಭ ಸಣಿಕಾ ಕೇಂದ್ರ್ರದಲ್ಲಿ ಪಕ್ಷದ ಪ್ರಮುಖರೊಂದಿಗೆ ಹಾಜರಿದ್ದು ಗಮನ ಸೆಳೆದರು.
ಬೆಳಗ್ಗೆ 8 ಗಂಟೆಗೆ ಮತ ಎಣಿಕಾ ಕಾರ್ಯ ಆರಂಭವಾಗಿ ಸರಿ ಸುಮಾರು ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಎರಡೂ ಕ್ಷೇತ್ರಗಳ ವಿಜೇತ ಅಭ್ಯರ್ಥಿಗಳ ಘೋಷಣೆಯಾಯಿತು. ಒಟ್ಟು ಇಪ್ಪತ್ತು ಸುತ್ತುಗಳ ಮತ ಎಣಿಕಾ ಕಾರ್ಯದ ಸಂದರ್ಭ ಮೊದಲ ಎಂಟು ಸುತ್ತುಗಳಲ್ಲಿ ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ.ಬೋಪಯ್ಯ ಮುನ್ನಡೆಯನ್ನು ಕಂಡುಕೊಂಡರಾದರೆ ನಂತರದ ಸುತ್ತುಗಳಲ್ಲಿ ಮುನ್ನಡೆಯನ್ನು ಕಳೆದುಕೊಳ್ಳುತ್ತಾ ಸಾಗಿ ಪರಾಭವಗೊಂಡರಾದರೆ, ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಅವರು ಮಾತ್ರ ಎಲ್ಲಾ ಸುತ್ತುಗಳಲ್ಲಿ ತಮ್ಮ ಮುನ್ನಡೆಯನ್ನು ಕಾಯ್ದುಕೊಳ್ಳುತ್ತಲೆ ಬರುವ ಮೂಲಕ ಗೆಲುವು ಸಾಧಿಸಿದ್ದು ಕುತೂಹಲಕಾರಿ.
ಪ್ರತಿಬಂಧಕಾಜ್ಞೆ ನಡುವೆ ಕಾರ್ಯಕರ್ತರ ಉತ್ಸಾಹ- ಚುನಾವಣಾ ಮತ ಎಣಿಕಾ ಕಾರ್ಯದ ಬಳಿಕ ತೆರೆದ ವಾಹನದಲ್ಲಿ ಎ.ಎಸ್.ಪೊನ್ನಣ್ಣ ಅವರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಸೈಂಟ್ ಜೋಸೆಫ್ ಕಾನ್ವೆಂಟ್‍ನಿಂದ ಜಯ ಘೋಷಣೆಗಳೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಮತ ಎಣಿಕಾ ಕಾರ್ಯ ಮತ್ತು ಸಂಭ್ರಮಾಚರಣೆಯ ಸಂದರ್ಭ ಮಾಜಿ ಎಂಎಲ್‍ಸಿಗಳಾದ ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಟಿ.ಪಿ.ರಮೇಶ್, ತೆನ್ನಿರ ಮೈನಾ, ಕೆ.ಯು.ಅಬ್ದುಲ್ ರಜಾಕ್, ಕೊಲ್ಯದ ಗಿರೀಶ್ ಸೇರಿದಂತೆ ಹಲ ಪ್ರಮುಖರುಗಳಿದ್ದರು.