ಮಡಿಕೇರಿ ಮೇ 13 : ಕಾರ್ಯಕರ್ತರ ಒಗ್ಗಟ್ಟಿನ ಹೋರಾಟದ ಪರಿಶ್ರಮವೇ ನನ್ನ ಗೆಲುವಿಗೆ ಕಾರಣವಾಗಿದೆ. ನನ್ನನ್ನು ಹೊರಗಿನ ಅಭ್ಯರ್ಥಿ ಎಂದು ವ್ಯಂಗ್ಯವಾಡಿದವರಿಗೆ ಮತದಾರರೇ ತಕ್ಕ ಉತ್ತರ ನೀಡುವ ಮೂಲಕ ಅವರನ್ನೇ ಹೊರ ಕಳುಹಿಸಿದ್ದಾರೆ ಎಂದು ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ತಿರುಗೇಟು ನೀಡಿದರು.
ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೊನ್ನಣ್ಣ, ತಮ್ಮ ಗೆಲುವಿಗೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರು ಮತ್ತು ಮತದಾರರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದೇವೆ. ಆ ಮೂಲಕ ಬಿಜೆಪಿಯ ಭದ್ರಕೋಟೆಯನ್ನು ಬೇಧಿಸಿದ್ದೇವೆ. ಚುನಾವಣೆ ಸಂದರ್ಭ ಕ್ಷೇತ್ರದ ಪ್ರಗತಿಯ ಕುರಿತು ಮತದಾರರಿಗೆ ಭರವಸೆ ನೀಡಿದ್ದೇನೆ. ಅದರಂತೆ ಅಭಿವೃದ್ದಿ ಕಾರ್ಯಗಳನ್ನು ಮಾಡುವುದಾಗಿ ಪೊನ್ನಣ್ಣ ಹೇಳಿದರು.
::: ಪ್ರೀತಿಯಿಂದ ಕೊಡಗಿನ ಹುಡುಗನ ಕೈ ಹಿಡಿದಿದ್ದಾರೆ :::
ಮಡಿಕೇರಿ ಕ್ಷೇತ್ರದ ವಿಜೇತ ಅಭ್ಯರ್ಥಿ ಡಾ.ಮಂಥರ್ ಗೌಡ ಮಾತನಾಡಿ, ನನ್ನ ಗೆಲುವಿಗೆ ಶ್ರಮಿಸಿದ ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ಮತದಾರರಿಗೆ ಧನ್ಯವಾದ ಸಲ್ಲಿಸಿದರು. ಈಗಾಗಲೇ ನೀಡಿರುವ ಭರವಸೆಯಂತೆ ಮಡಿಕೇರಿ ಕ್ಷೇತ್ರದ ಪ್ರಗತಿಗೆ ಬದ್ದನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. ನನ್ನನ್ನು ಹೊರಗಿನಿಂದ ಬಂದವನು ಎಂದು ಟೀಕಿಸಿದ್ದರು. ಆದರೆ ಮತದಾರರು ಮಾತ್ರ ಪ್ರೀತಿಯಿಂದ ಕೊಡಗಿನ ಹುಡುಗನ ಕೈ ಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ಖಂಡಿತವಾಗಿ ದ್ವೇಷ ರಾಜಕೀಯ ಮಾಡದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಡಿಕೇರಿ ಕ್ಷೇತ್ರದ ಪ್ರಗತಿಗೆ ಶ್ರಮಿಸುವುದಾಗಿ ಹೇಳಿದರು.










