ಮಡಿಕೇರಿ ಮೇ 14 : ಅಭಿವೃದ್ಧಿ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುತ್ತೇನೆ, ಜನ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳಬಹುದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಏನಾಗಿದೆ ಎನ್ನುವ ಬಗ್ಗೆ ಯೋಚಿಸಲ್ಲ, ಮುಂದೆ ಏನಾಗಬೇಕು ಎನ್ನುವುದರ ಕುರಿತು ಚಿಂತನೆ ಮಾಡುತ್ತೇನೆ. ಎಲ್ಲರನ್ನು ಒಗ್ಗಟ್ಟಾಗಿ ಮುನ್ನಡೆಸುವ ಮೂಲಕ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಬಡವರ ಸೇವೆ ಮಾಡಬೇಕು ಎನ್ನುವುದು ನನ್ನ ಮೂಲ ಉದ್ದೇಶ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ನನ್ನ ಗೆಲುವಿಗಾಗಿ ತ್ಯಾಗ ಮಾಡಿದ್ದಾರೆ. ಅಪಪ್ರಚಾರಗಳಿಗೆ ತಲೆ ಕೆಡಿಸಿಕೊಳ್ಳದೆ ಅಭಿವೃದ್ಧಿಪರ ಚಿಂತನೆಯೊoದಿಗೆ ಮತಯಾಚಿಸಿದ ಪರಿಣಾಮ ಗೆಲುವು ಸಿಕ್ಕಿದೆ. ಜನ ನನಗೆ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ಉಳಿಸಿಕೊಳ್ಳುತ್ತೇನೆ. ಈ ಹಿಂದಿನ ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ಹೇಳುತ್ತಿಲ್ಲ. ಬಾಕಿ ಉಳಿದಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಆರೋಗ್ಯ ಕ್ಷೇತ್ರದ ಸುಧಾರಣೆಗೆ ಮೊದಲ ಆದ್ಯತೆ ನೀಡಲಾಗುವುದು. ನಗರವನ್ನು ಅಭಿವೃದ್ಧಿ ಪಡಿಸಲಾಗುವುದು, ಕಸ ವಿಲೇವಾರಿಗೆ ವೈಜ್ಞಾನಿಕ ರೂಪ ನೀಡಲಾಗುವುದು, ಕಂದಾಯ ಇಲಾಖೆಯನ್ನು ದಲ್ಲಾಳಿ ಮತ್ತು ಭ್ರಷ್ಟಾಚಾರ ಮುಕ್ತಗೊಳಿಸಲಾಗುವುದು, ಬಡ ಕಾರ್ಮಿಕ ವರ್ಗಕ್ಕಾಗಿ ವಸತಿ ಯೋಜನೆ ಜಾರಿಗೆ ತರಲಾಗುವುದು. ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಸೋಮಾವಾರಪೇಟೆಯ ಶತಮಾನೋತ್ಸವ ಭವನ, ಕುಶಾಲನಗರದ ಕಲಾಮಂದಿರ ಸೇರಿದಂತೆ ಅಪೂರ್ಣಗೊಂಡಿರುವ ಕಟ್ಟಡಗಳ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿ ಯಾರಾಗಬೇಕೆನ್ನುವುದನ್ನು ಹೈಕಮಾಂಡ್ ಹಾಗೂ ಹಿರಿಯರು ನಿರ್ಧರಿಸುತ್ತಾರೆ. ನಾನು ಮೊದಲ ಮೆಟ್ಟಿಲು ಏರುತ್ತಿರುವುದರಿಂದ ಕಲಿಯುವುದು ಬೇಕಾದಷ್ಟಿದೆ, ಸಚಿವ ಸ್ಥಾನದ ಮೇಲೆ ಆಸಕ್ತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಮಂತರ್ ಗೌಡ ಉತ್ತರಿಸಿದರು.
ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಒಗ್ಗಟ್ಟಿನ ಫಲವಾಗಿ ಜಯ ಲಭಿಸಿದೆ. ಸ್ಟಾರ್ ಪ್ರಚಾರಕರಿಲ್ಲದೆ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಜನ ದೊಡ್ಡ ಜವಾಬ್ದಾರಿಯನ್ನೇ ನೀಡಿದ್ದಾರೆ ಎಂದರು.
ಕೆಪಿಸಿಸಿ ಪ್ರಮುಖ ಹೆಚ್.ಎಸ್.ಚಂದ್ರಮೌಳಿ ಮಾತನಾಡಿ ಕಾನೂನಿನ ಚೌಕಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಯುವ ಶಾಸಕ ಮಂತರ್ ಗೌಡ ಅವರಿಗೆ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು.
ಆಕಸ್ಮಿಕವಾಗಿ ತಪ್ಪುಗಳು ನಡೆದರೆ ಕಿವಿಹಿಂಡಿ ಸರಿಪಡಿಸುವ ಪ್ರಯತ್ನ ಮಾಡಲಾಗುವುದು. ಬೆಂಗಳೂರಿನಲ್ಲಿ ಆಗಬೇಕಾದ ಕೆಲಸ ನಾವು ಮಾಡುತ್ತೇವೆ. ಮಡಿಕೇರಿ ಕ್ಷೇತ್ರದಲ್ಲಿ ಶಾಸಕರು ಜನರೊಂದಿಗೆ ಇರುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆ.ಪಿ.ಚಂದ್ರಕಲಾ, ಜಿಲ್ಲಾ ವಕ್ತಾರ ಮುನೀರ್ ಅಹಮ್ಮದ್ ಹಾಗೂ ನಗರಾಧ್ಯಕ್ಷ ಬಿ.ವೈ.ರಾಜೇಶ್ ಉಪಸ್ಥಿತರಿದ್ದರು.










