ಮಡಿಕೇರಿ ಮೇ 17 : ಇದೇ ಮೇ, 20 ಮತ್ತು 21 ರಂದು ನಡೆಯುವ ಸಿಇಟಿ(ಸಾಮಾನ್ಯ ಪ್ರವೇಶ ಪರೀಕ್ಷೆ) ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಿಇಟಿ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮೇ, 20 ಮತ್ತು 21 ರಂದು ಬೆಳಗ್ಗೆ 10.30 ಯಿಂದ 11.50 ಗಂಟೆವರೆಗೆ ಮತ್ತು ಮಧ್ಯಾಹ್ನ 2.30 ರಿಂದ 3.50 ಗಂಟೆ ವರೆಗೆ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
ಸಿಇಟಿ ಪರೀಕ್ಷೆಯು ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ 722 ವಿದ್ಯಾರ್ಥಿಗಳು, ಸಂತ ಮೈಕಲರ ಶಾಲೆ 240 ವಿದ್ಯಾರ್ಥಿಗಳು, ಸಂತ ಜೋಸೆಫರ ಶಾಲೆ 312 ವಿದ್ಯಾರ್ಥಿಗಳು ಒಟ್ಟು 1274 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳಲ್ಲಿ ಸಿಸಿಟಿವಿ ಇರಬೇಕು ಎಂದು ಅವರು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪುಟ್ಟರಾಜು ಅವರು ಮಾಹಿತಿ ನೀಡಿ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಯಾವುದೇ ರೀತಿಯ ಕೈಗಡಿಯಾರವನ್ನು ಕಟ್ಟಿಕೊಂಡು ಅಥವಾ ತೆಗೆದುಕೊಂಡು ಹೋಗುವಂತಿಲ್ಲ. ಕ್ಯಾಲ್ಕುಲೇಟರ್ ಅಥವಾ ಲಾಗ್ ಟೇಬಲ್‍ಗಳನ್ನು ಪರೀಕ್ಷಾ ಸಮಯದಲ್ಲಿ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಪರೀಕ್ಷಾ ಕೊಠಡಿ ಒಳಗೆ ಯಾವುದೇ ರೀತಿಯ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳನ್ನು(ಮೊಬೈಲ್ ಪೋನ್, ಬ್ಲೂ ಟೂತ್, ಸ್ಲೈಡ್ ರೂಲ್ಸ್, ಕ್ಯಾಲ್ಕುಲೇಟರ್, ವೈಟ್ ಪ್ಲೂಯಿಡ್, ವೈಯರ್ ಲೆಸ್ ಸೆಟ್ಸ್ ಮತ್ತಿತರ) ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಖಜಾನಾಧಿಕಾರಿ ಪದ್ಮಜಾ, ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ವಿಜಯ, ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅಲೆಕ್ಸ್ ರಾಣಿ, ಸಂತ ಮೈಕಲರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಆಂಥೋನಿ, ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್, ತಹಶೀಲ್ದಾರ್ ಕಿರಣ್ ಗೌರಯ್ಯ, ಇತರರು ಪರೀಕ್ಷೆ ಸಂಬಂಧ ಹಲವು ಮಾಹಿತಿ ನೀಡಿದರು.









