ಮಡಿಕೇರಿ ಮೇ 17 : ಕೊಡಗಿನ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಬಿಜೆಪಿಯೇತರ ಪಕ್ಷಗಳ ಒಳ ಒಪ್ಪಂದವೇ ಕಾರಣವೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸೋಲಿನ ಹೊಣೆಯನ್ನು ಜಿಲ್ಲಾಧ್ಯಕ್ಷನಾಗಿ ನಾನೇ ಹೊರಲಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕೆನ್ನುವ ಏಕ ಮಾತ್ರ ಉದ್ದೇಶದಿಂದ ಇತರ ಪಕ್ಷಗಳೆಲ್ಲವು ಒಂದಾಗಿ ಕೆಲಸ ಮಾಡಿವೆ ಎಂದು ಟೀಕಿಸಿದರು.
ಜಿಲ್ಲೆಯ ಎರಡು ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿರಬಹುದಾದರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಡೆದುಕೊಂಡ ಮತಗಳನ್ನು ತುಲನೆ ಮಾಡಿದರೆ ಈ ಬಾರಿ ಬಿಜೆಪಿ ಹೆಚ್ಚಿನ ಮತಗಳನ್ನು ಪಡೆದುಕೊಂಡಿದೆ. ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರದಲ್ಲಿ ಒಟ್ಟಾಗಿ ಕಳೆದ ಬಾರಿಗಿಂತ 13,079 ಹೆಚ್ಚಿನ ಮತಗಳನ್ನು ಬಿಜೆಪಿ ಗಳಿಸಿದೆ ಎಂದು ಸಮರ್ಥಿಸಿಕೊಂಡರು.
ಜೆಡಿಎಸ್ ಒಳಗೊಂಡಂತೆ ಎಲ್ಲಾ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿರುವುದೇ ಕಾಂಗ್ರೆಸ್ ಗೆಲುವಿಗೆ ಕಾರಣವೆಂದರು.
ಈ ಬಾರಿಯ ಚುನಾವಣೆಯಲ್ಲಿನ ಜನಾಭಿಪ್ರಾಯವನ್ನು ಒಳ್ಳೆಯ ಮನಸ್ಸಿನಿಂದ ಸ್ವೀಕಾರ ಮಾಡಿದ್ದೇವೆ. ಚುನಾವಣೆಯಲ್ಲಿ ಸೋಲು ಎದುರಾಗಿದ್ದರು, ಪಕ್ಷದ ಎಲ್ಲಾ ಹಂತದ ಪ್ರಮುಖರು, ಕಾರ್ಯಕರ್ತರು ಸಾಕಷ್ಟು ಶ್ರಮ ವಹಿಸಿ ಕಾರ್ಯನಿರ್ವಹಿಸಿದ್ದಾರೆ. ಪಕ್ಷದ ಸಂಘಟನೆಯೊಂದಿಗೆ ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳುವುದಾಗಿ ರಾಬಿನ್ ದೇವಯ್ಯ ಸ್ಪಷ್ಟಪಡಿಸಿದರು.
ಕೊಡಗಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿ. ದ್ವೇಷ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಬಿಜೆಪಿ ಕಾರ್ಯಕರ್ತರಿಗೆ ಯಾವುದೇ ಸಂದರ್ಭದಲ್ಲಿ ತೊಂದರೆಯಾದಲ್ಲಿ ಅದನ್ನು ಎದುರಿಸುವ ಕೆಲಸ ಮಾಡುವುದಾಗಿ ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಬಿನ್ ದೇವಯ್ಯ, ಈ ಬಾರಿಯ ಚುನಾವಣೆಯಲ್ಲಿ ಕೊಡಗಿನಲ್ಲಿ ಜಾತಿ ರಾಜಕಾರಣ ನಡೆದಿಲ್ಲ ಮತ್ತು ಇಂತಹ ನಡೆಗಳಿಗೆ ಜನತೆ ಮನ್ನಣೆ ನೀಡುವುದಿಲ್ಲವೆಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಮಾತನಾಡಿ, ಜನಾದೇಶವನ್ನು ನಾವು ಸ್ವೀಕರಿಸಿದ್ದೇವೆ, ಬಿಜೆಪಿ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದಲ್ಲಿದ್ದುಕೊಂಡು ಸಾಕಷ್ಟು ಅನುಭವ ಪಡೆದಿದೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯ ಮೂಲಕ ಜನತೆಗೆ ನೀಡಿದ ಗ್ಯಾರಂಟಿ ಕಾರ್ಡ್‍ನ ಭರವಸೆಗಳಿಂದ ತಾಯಂದಿರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಅಧಿಕಾರಕ್ಕೆ ಬರುವ ಕಾಂಗ್ರೆಸ್ ಸರ್ಕಾರ ತಮ್ಮ ಭರವಸೆ ಮತ್ತು ಆಶ್ವಾಸನೆಗಳನ್ನು ಮೊದಲು ಪೂರ್ಣಗೊಳಿಸಲಿ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಪಂಡ ಕಾಳಪ್ಪ, ಪಕ್ಷದ ಪ್ರಮುಖರಾದ ಅರುಣ್ ಕುಮಾರ್ ಹಾಗೂ ಮಾದಪ್ಪ ಉಪಸ್ಥಿತರಿದ್ದರು.









