ಮಡಿಕೇರಿ ಮೇ 19 : ಇತಿಹಾಸ ಪ್ರಸಿದ್ಧ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು “ಶ್ರೀ ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆಯು ಮೇ 20 ಹಾಗೂ 21 ರಂದು ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟೀರ ಸುಗುಣ ಮುತ್ತಣ್ಣ ಹಾಗೂ ಕಾರ್ಯದರ್ಶಿ ಮೂಕಳೇರ ರಮೇಶ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಾರದ ಹಿಂದೆ ಶನಿವಾರ ಸಂಜೆ ಊರಿನ ಅಂಬಲದಲ್ಲಿ “ದೇವ ಕಟ್ಟ್” ಬೀಳುವ ಮೂಲಕ ಊರಿನಲ್ಲಿ ವಿವಿಧ ಕಟ್ಟುಪಾಡುಗಳಿಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮೇ 20 ರಂದು ಅಪರಾಹ್ನ 2 ರಿಂದ 2-30ಗಂಟೆಗೆ ಊರು ತಕ್ಕರಾದ ಚಮ್ಮಟೀರ ಕುಟುಂಬಸ್ಥರ ಬಲ್ಯಮನೆಯಿಂದ “ಪೊಲವಂದೆರೆ” ಹೊರಡುವ ಮೂಲಕ ಹಬ್ಬಕ್ಕೆ ಚಾಲನೆ ದೊರೆಯಲಿದೆ. ನಂತರ ಊರಿನ ನಿಗದಿತ ಅಂಬಲಗಳಲ್ಲಿ ವಿವಿಧ ಕಟ್ಟುಪಾಡಿನೊಂದಿಗೆ ಸಾಂಪ್ರದಾಯಿಕ ಆಚರಣೆಗಳು ನಡೆದು ಅಪರಾಹ್ನ 3.30ರ ಸುಮಾರಿಗೆ ಊರಿನ ಪ್ರಮುಖ ದೇವಾಲಯಗಳಲ್ಲೊಂದಾದ “ಪೊಲವಪ್ಪಂಡ ಕೋಟ”ದಲ್ಲಿ ಜಿಲ್ಲೆಯ ಮೂಲನಿವಾಸಿಗಳಲ್ಲೊಬ್ಬರಾದ ಪಣಿಕ ಜನಾಂಗದ ವ್ಯಕ್ತಿಯೊಬ್ಬರಿಗೆ ಪೊಲಂದೆರೆ ಆವೇಶ ಬರುವ ಮೂಲಕ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.
21 ರಂದು ಬೆಳಿಗ್ಗೆಯಿಂದಲೇ ಚಮ್ಮಟೀರ ಬಲ್ಯಮನೆಯಲ್ಲಿ ಹಬ್ಬದ ಸಂಭ್ರಮದ ನಂತರ ಅಪರಾಹ್ನ 2.30 ರಿಂದ 3 ಗಂಟೆ ಒಳಗೆ ಕೃತಕವಾಗಿ ಶೃಂಗರಿಸಲಾದ ಕುದುರೆ ಹಾಗೂ ಮೊಗ(ಪೂಮೊಗ) ಹೊರಡುವುದು , ಅಪರಾಹ್ನ 3-30 ಗಂಟೆಗೆ ಮೂಕಳೇರ ಬಲ್ಯಮನೆಯಿಂದ ಕುದುರೆ ಹಾಗೂ ಮೊಗ ಹೊರಡುವುದು, ಸಂಜೆ 4 ಗಂಟೆಯಿಂದ 4.30 ಗಂಟೆಯ ಒಳಗೆ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದ ಅಂಬಲದಲ್ಲಿ ಎರಡು ಕುದುರೆ ಹಾಗೂ ಮೊಗಗಳ ಸಮಾಗಮ ಜೊತೆಯಲ್ಲಿ ಹತ್ತಾರು ವಿವಿಧ ವೇಷಧಾರಿಗಳು, ನಂತರ ಊರಿನವರಿಂದ ಪರಸ್ಪರ ಕೆಸರು ಎರಚಾಟದ ಸಂಭ್ರಮ ಬಳಿಕ ಭದ್ರಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಲಿದೆ ಎಂದು ತಿಳಿಸಿದರು.
ಹೊರ ಊರಿನವರಿಗೆ ಕೆಸರು ಎರಚುವಂತಿಲ್ಲ. ಆದರೆ ಹಬ್ಬದಲ್ಲಿ ಮುಕ್ತವಾಗಿ ಸಂಭ್ರಮಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಪೊನ್ನಂಪೇಟೆಯಿಂದ ಒಂದು ಕಿ.ಮಿ ದೂರದಲ್ಲಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನಕ್ಕೆ ಪೊನ್ನಂಪೇಟೆಯಿಂದ ಬರುವವರು ಕುಂದಾ ರಸ್ತೆ ಮೂಲಕ, ವಿರಾಜಪೇಟೆ ಕಡೆಯಿಂದ ಬರುವವರು ಹಾತೂರು ಕುಂದಾ ಮಾರ್ಗದಲ್ಲಿ ಅಥವಾ ಗೋಣಿಕೊಪ್ಪ ಭಾಗದಿಂದ ಬರುವವರು ಪರ್ಯಾಯ ಮಾರ್ಗವಾಗಿ ಜೋಡುಬೀಟಿಯಿಂದ ಒಳರಸ್ತೆ ಮೂಲಕ ಬರಬಹುದಾಗಿದೆ ಎಂದು ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ತಿಳಿಸಿದೆ.