
ಮಡಿಕೇರಿ NEWS DESK ಫೆ.23 : ರಾಜ್ಯದಲ್ಲಿ ದಲಿತರ ಒಳ ಮೀಸಲಾತಿ ಮತ್ತು ಹಕ್ಕುಗಳ ಕುರಿತು ದಲಿತ ಸಮುದಾಯಗಳು ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಕರೆ ನೀಡಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಡಿಕೇರಿಯಲ್ಲಿ ಹಮ್ಮಿಕೊಂಡಿದ್ದ ಕೊಡಗು ಜಿಲ್ಲಾ ದಲಿತ ಸಮುದಾಯದ ಸ್ವಾಭಿಮಾನ ಸಮಾವೇಶ, ‘ಕರ್ನಾಟಕ ದಲಿತ ರತ್ನ’ ಮತ್ತು ‘ಕೊಡಗು ರತ್ನ’ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಗರದ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ರಾಜ್ಯ ಸರಕಾರ ಒಳ ಮೀಸಲಾತಿ ಜಾರಿಗೆ ಮುಂದಾಗಿದೆ. ಆದರೆ ಅದರ ರೂಪು-ರೇಷೆ, ನೀತಿ-ನಿಯಮಗಳು ಇನ್ನೂ ಜಾರಿಗೆ ಬಂದಿಲ್ಲ. ಹೀಗಿದ್ದರೂ ಬಿಜೆಪಿ, ಆರ್‌ಎಸ್‌ಎಸ್ ಮತ್ತದರ ಅಂಗ ಸಂಘಟನೆಗಳು ಅಪಪ್ರಚಾರ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಮಾತನಾಡಿ, ಪ್ರಪಂಚದ ಶ್ರೇಷ್ಠ ದಾಖಲೆ ಎಂದೇ ಕರೆಯಲಾಗುವ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ. ಪ್ರತಿಯೊಬ್ಬರೂ ಸಂವಿಧಾನವನ್ನು ಅಧ್ಯಯನ ಮಾಡುವ ಮೂಲಕ ಅಂಬೇಡ್ಕರ್ ಅವರನ್ನು ಸ್ಮರಿಸಬೇಕು ಎಂದು ಹೇಳಿದರು. ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ದಲಿತ ಸಂಘಟನೆಗಳು ಮಹಿಳೆಯರ ಏಳಿಗೆಗೆ ಹೆಚ್ಚಿನ ಆಧ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಕೊಡಗು ಜಿಲ್ಲೆಯಲ್ಲಿ ದಲಿತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕೊಡಗಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನದ ಸಂಖ್ಯೆಗಳನ್ನು ಹೆಚ್ಚಳ ಮಾಡಬೇಕು. ಇದರಿಂದ ಶೋಷಿತ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಅನುಕೂಲವಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಅವರಲ್ಲಿ ಮನವಿ ಮಾಡಿದರು. *‘ರತ್ನ ಪ್ರಶಸ್ತಿ’ ಪ್ರದಾನ* ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಅವರಿಗೆ ‘ಕರ್ನಾಟಕ ದಲಿತ ರತ್ನ’ ಹಾಗೂ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮತ್ತು ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ‘ಕೊಡಗು ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಚಿವರು, ಶಾಸಕರು ಮತ್ತು ಗಣ್ಯರು ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಸುದರ್ಶನ ವೃತ್ತದಿಂದ ಗಾಂಧಿ ಮೈದಾನದವರೆಗೆ ಬೈಕ್ ಮತ್ತು ವಾಹನ ಜಾಥಾ ನಡೆಸಲಾಯಿತು. ಡೊಳ್ಳು ಕುಣಿತ, ವೀರಗಾಸೆ ನೃತ್ಯ, ಕೊಡ್ಲಿಪೇಟೆಯ ಮಾನವತಾ ಕಲಾ ತಂಡದ ಅಂಬೇಡ್ಕರ್ ಗೀತೆ ಗಾಯನ ಕಾರ್ಯಕ್ರಮಕ್ಕೆ ಮೆರುಗು ತುಂಬಿತು. ವೇದಿಕೆಯಲ್ಲಿ ಹೈ ಕೋರ್ಟ್ ವಕೀಲ ಹೆಚ್.ಎಸ್. ಚಂದ್ರಮೌಳಿ, ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಕೊಡಗು ಡಿಎಸ್‌ಎಸ್ ಸಂಚಾಲಕ ಹೆಚ್.ಎಲ್. ದಿವಾಕರ್, ಜಿಲ್ಲಾಸ್ಪತ್ರೆ ಸ್ತ್ರೀ ರೋಗ ತಜ್ಞೆ ಸೌಮ್ಯ, ಡಿಎಸ್‌ಎಸ್ ಪ್ರಮುಖರಾದ ವಂಶಿ ಹೆಜ್ಜೂರು, ಜಯಪ್ಪ ಹಾನಗಲ್, ವಿಭಾಗೀಯ ಸಂಚಾಲಕ ಅಂಕಯ್ಯ, ವಕೀಲ ಜಯೇಂದ್ರ, ಎಂ.ಸೋಮಶೇಖರ್, ದೀಪಕ್ ಪೊನ್ನಪ್ಪ, ಮೋಹನ್ ಮೌರ್ಯ, ಮೂಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ಉದ್ಯಮಿ ಶರೀನ್, ಕಾಂಗ್ರೆಸ್ ಪಕ್ಷ ಪ್ರಮುಖರಾದ ಟಿ.ಪಿ.ರಮೇಶ್, ಇಸಾಖ್ ಖಾನ್, ಹಂಸ, ಇಸ್ಮಾಯಿಲ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.









