ಮಡಿಕೇರಿ ಮೇ 19 : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಮೇ 20 ರಿಂದ 28 ರವರೆಗೆ ಗೌಡ ಸಮುದಾಯದ ‘ಲೆದರ್ ಬಾಲ್ ಟಿ-10 ಪ್ರೀಮಿಯರ್ ಲೀಗ್ ಕ್ರಿಕೆಟ್ ಲೀಗ್’ ಪಂದ್ಯಾವಳಿ ನಡೆಯಲಿದೆ ಎಂದು ವೇದಿಕೆಯ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ತಿಳಿಸಿದರು.
ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 10.30 ಗಂಟೆಗೆ ಪಂದ್ಯಾವಳಿಯನ್ನು ಅಂಡರ್ 15 ಕರ್ನಾಟಕ ಕ್ರಿಕೆಟ್ ತಂಡದ ಆಟಗಾರರಾದ ತನಿಷ್ಕಾ ನವೀನ್ ಉದ್ಘಾಟಿಸಲಿದ್ದು, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ, ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷರಾದ ಪಾಣತ್ತಲೆ ಜಗದೀಶ್ ಮಂದಪ್ಪ, ಕ್ರೀಡಾ ಅಧ್ಯಕ್ಷರಾದ ಬಾಳಾಡಿ ಮನೋಜ್ ಪಾಲ್ಗೊಳ್ಳಲಿದ್ದಾರೆಂದು ಮಾಹಿತಿಯನ್ನಿತ್ತರು.
8 ತಂಡಗಳ ನಡುವೆ ಹಣಾಹಣಿ : ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳಾದ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ, ಎಂಸಿಬಿ, ಜಿ. ಕಿಂಗ್ಸ್ ಸಿದ್ದಲಿಂಗಪುರ, ಟೀಂ ಭಗವತಿ, ಎಲೈಟ್ ಕ್ರಿಕೆಟ್ ಕ್ಲಬ್, ಕೆಜಿಎಸ್ ಸ್ಟ್ರೈಕರ್ಸ್, ಕುಕ್ಲೂರು ಬುಲ್ಸ್, ಕಾಫಿ ಕ್ರಿಕೆಟರ್ಸ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಮೇ27 ಮತ್ತು 28 ರಂದು ಕ್ವಾಲಿಫೈಯರ್ ಪಂದ್ಯಗಳು ನಡೆಯಲಿದ್ದು, ಮೇ28 ರಂದು ಮಧ್ಯಾಹ್ನ ಫೈನಲ್ಸ್ ಪಂದ್ಯ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು.
ಬಹುಮಾನ : ಪಂದ್ಯಾವಳಿ ವಿಜೇತ ತಂಡಕ್ಕೆ 1 ಲಕ್ಷ ರೂ. ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 50 ಸಾವಿರ ರೂ. ನಗದು ಮತ್ತು ಟ್ರೋಫಿಯನ್ನು ನೀಡಲಾಗುತ್ತದೆಂದು ವಿವರಗಳನ್ನಿತ್ತರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷರಾದ ಪಾಣತ್ತಲೆ ಜಗದೀಶ್ ಮಂದಪ್ಪ, ಪದಾಧಿಕಾರಿಗಳಾದ ಬಾಳಾಡಿ ಮನೋಜ್, ಕುಕ್ಕೇರ ಲಕ್ಷ್ಮಣ್, ದಂಬೆಕೊಡಿ ಗಯಾ ಉಪಸ್ಥಿತರಿದ್ದರು.