ಮಡಿಕೇರಿ ಮೇ 29 : ಹತ್ತು ಕುಟುಂಬ ಹದಿನೆಂಟು ಗೋತ್ರದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಗೌಡ ಜನಾಂಗದ ನಡುವೆ ನಡೆದ ಗೌಡ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿದಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಕಾಫಿ ಕ್ರಿಕೆಟರ್ಸ್ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಫೈನಲ್ ಪಂದ್ಯಾವಳಿಯಲ್ಲಿ ಟಾಸ್‍ಗೆದ್ದ ಕಾಫಿ ಕ್ರಿಕೆಟರ್ಸ್ ತಂಡ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಎಲೈಟ್ ತಂಡ 10 ಓವರ್‍ಗೆ 7 ವಿಕೆಟ್ ನಷ್ಟಕ್ಕೆ 94 ರನ್ ಬಾರಿಸಿತು.
ಎಲೈಟ್ ತಂಡದ ಪರವಾಗಿ ತಳೂರು ವಿಕ್ಕಿ 3 ಸಿಕ್ಸ್, 2 ಬೌಂಡರಿಗಳನ್ನು ಒಳಗೊಂಡು 17 ಎಸೆತಕ್ಕೆ 32 ರನ್ ಬಾರಿಸಿತು.
ಕಾಫಿ ಕ್ರಿಕೆಟರ್ಸ್‍ನ ಕುದುಕುಳಿ ಮಿಥುನ್, ಕುಡಿಕಲ್ ಅನಿಲ್ ತಲಾ 2 ವಿಕೆಟ್ ಪಡೆದರು. ರನ್‍ಔಟ್ ಮೂಲಕ 2 ವಿಕೆಟ್ ಉದುರಲ್ಪಟ್ಟಿತು.
ಎಲೈಟ್ ತಂಡ ನೀಡಿದ 95 ರನ್‍ಗಳ ಸವಾಲನ್ನು ಬೆನ್ನಟ್ಟಿದ ಕಾಫಿ ಕ್ರಿಕೆಟರ್ಸ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಸ್ಫೋಟಕ ಬ್ಯಾಟ್ಸ್‍ಮನ್ ಕುಡೆಕಲ್ ಅನಿಲ್ ಕೇವಲ 3 ರನ್‍ಗಳಿಸಿ ಔಟ್ ಆಗುವುದರೊಂದಿಗೆ ಕಾಫಿ ಕ್ರಿಕೆಟರ್ಸ್ ತಂಡ ಸಂಕಷ್ಟಕ್ಕೆ ಸಿಲುಕಿತು.
ಉಳಿದ ಆಟಗಾರರು ಎಷ್ಟೇ ಪ್ರಯತ್ನಪಟ್ಟರೂ ಕೂಡ ಎಲೈಟ್ ತಂಡದ ಬೌಲರ್‍ಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಕೊನೆಗೆ 10 ಓವರ್‍ಗೆ 7 ವಿಕೆಟ್‍ನಷ್ಟಕ್ಕೆ 68 ರನ್‍ಗಳಿಸಿ ಕಾಫಿ ಕ್ರಿಕೆಟರ್ಸ್ ತಂಡ ಸೋಲಿಗೆ ಶರಣಾಯಿತು.
ಎಲೈಟ್ ಪರ ಲೋಕೆಶ್ ಹಾಗೂ ವಿಕ್ಕಿ ತಲಾ 2 ವಿಕೆಟ್ ಪಡೆದರು.
ಅವಿನ್ ಮತ್ತು ಗಣಿತ್ ತಲಾ ಒಂದೊಂದು ವಿಕೆಟ್ ಗಳಿಸಿದರು. ರನೌಟ್ ಮೂಲಕ 1 ವಿಕೆಟ್ ಉರುಳಿತು. ಪಂದ್ಯದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕಾಫಿ ಕ್ರಿಕೆಟರ್ಸ್ ತಂಡದ ಕುಡೆಕಲ್ ಅನಿಲ್ ಪಡೆಯುವ ಮೂಲಕ ಟಿವಿಎಸ್ ಸ್ಕೂಟರ್‍ನ್ನು ತಮ್ಮದಾಗಿಸಿಕೊಂಡರು.
ಅಂತಿಮ ಪಂದ್ಯದ ಪಂದ್ಯ ಪುರುಷೋತ್ತಮ ಹಾಗೂ ಬೆಸ್ಟ್‍ಬ್ಯಾಟ್ಸ್‍ಮೆನ್ ಪ್ರಶಸ್ತಿಯನ್ನು ಎಲೈಟ್ ತಂಡದ ತಳೂರು ವಿಕ್ಕಿ ಪಡೆದುಕೊಂಡರು. ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಕಾಫಿ ಕ್ರಿಕೆಟರ್ಸ್ ಜೆಪಿ ಮಾವಾಜಿ ಪಡೆದರು.
ಬೆಸ್ಟ್ ಕ್ಯಾಚರ್ ಪ್ರಶಸ್ತಿಯನ್ನು ಕಾಫಿ ಕ್ರಿಕೆಟರ್ಸ್‍ನ ವಿವಾನ್, ಬೆಸ್ಟ್ ವಿಕೆಟ್ ಕೀಪರ್ ಪ್ರಶಸ್ತಿಯನ್ನು ಉದಯೋನ್ಮಖ ಆಟಗಾರ ನಯನ್ ಚೆರಿಯಮನೆ, ಫೇರ್‍ಪ್ಲೇ ಪ್ರಶಸ್ತಿಯನ್ನು ಕೆಜಿಎಸ್ ಸ್ಟ್ರೆಕರ್ಸ್ ಪಡೆದುಕೊಂಡರು.
ಅನಿಲ್ ಕುಡೆಕಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ಎಂಸಿಬಿ ತೃತೀಯ ಸ್ಥಾನ, ಟೀಂ ಭಗವತಿ ನಾಲ್ಕನೇ ಸ್ಥಾನ ಪಡೆಯಿತು. ಪಂದ್ಯಾಟದಲ್ಲಿ ಮೊದಲನೆ ಸ್ಥಾನ ಪಡೆದ ತಂಡಕ್ಕೆ 1 ಲಕ್ಷ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 50 ಸಾವಿರ ನಗದು, ಟ್ರೋಫಿ, ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ವಿತರಿಸಲಾಯಿತು.
ಸಮಾರೋಪ ಸಮಾರಂಭ : ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಪಲ್ಗೊಂಡಿದ್ದ ಕೊಡಗು ಗೌಡ ಫೆಡರೇಷನ್ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ ಇಂತ ಕ್ರೀಡಾಕೂಟಗಳಿಗೆ ಸಮುದಾಯ ಬಾಂಧವರು ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಆಶಿಸಿದರು.
ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಮಾತನಾಡಿ, ಕ್ರೀಡೆಯಲ್ಲಿ ಜಾತಿ ಮತ ಎಂಬ ಯಾವುದೇ ಬೇಧಭಾವ ಇರುವುದಿಲ್ಲ. ಕ್ರೀಡೆಯಲ್ಲಿ ಒಗ್ಗಟ್ಟಿನ ಹೋರಾಟ ಮಾತ್ರ ಇರುತ್ತದೆ. ಇಂತಹ ಒಗ್ಗಟ್ಟಿನ ಮನೋಭಾವದೊಂದಿಗೆ ಪ್ರತೊಯೊಬ್ಬರು ಮುಂದಾಗಬೇಕು ಎಂದರು.
ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಗೌಡ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್, ಕುಶಾಲನಗರದ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಡಾ.ಕುಂಶ್ವತ್ ಕೋಳಿಬೈಲು, ಗೌಡ ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಗೌಡ ಯುವ ವೇದಿಕೆ ಮಾಜಿ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ದಾನಿ ಚೊಕ್ಕಾಡಿ ಶರತ್ ಕುಶಾಲಪ್ಪ, ವಿಜೇತರ ತಂಡದ ಮಾಲೀಕ ಎಡಿಕೇರಿ ಪ್ರಸನ್ನ ಹಾಗೂ ಮತ್ತಿತರು ಹಾಜರಿದ್ದರು.
ಕಟ್ಟೆಮನೆ ಸೋನಾಜಿತ್ ನಿರೂಪಿಸಿ, ಸೋನಲ್ ಸೀತಮ್ಮ ಪ್ರಾರ್ಥಿಸಿದರು. ದೇರಳ ನವೀನ್ ಸ್ವಾಗತಿಸಿ, ಪುದಿಯನೆರವನ ರಿಷಿತ್ ಮಾದಯ್ಯ ವಂದಿಸಿದರು.