ಸುಂಟಿಕೊಪ್ಪ ಜೂ.12 : ಪ್ರತಿಯೊಬ್ಬ ಮಕ್ಕಳು ತನ್ನದೇಯಾದ ಪ್ರತಿಭೆಗಳನ್ನು ಹೊಂದಿರುತ್ತಾರೆ. ಆ ಪ್ರತಿಭೆಯನ್ನು ಗುರುತಿಸಿ ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕೆಂದು
ಸಮಾಜ ಸೇವಕ ಹರಪಳ್ಳಿ ರವೀಂದ್ರ ಸಲಹೆ ನೀಡಿದರು.
ಸುಂಟಿಕೊಪ್ಪ ಗುಂಡುಗುಟ್ಟಿ ಮಂಜುನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಹೋಬಳಿಯ ಮಾದಾಪುರ, ಗರಗಂದೂರು, ಸುಂಟಿಕೊಪ್ಪ, ಚೆಟ್ಟಳ್ಳಿ, ಪೊನ್ನತ್‍ಮೊಟ್ಟೆ, ಕೆದಕಲ್, ಹೊಸಕೋಟೆ, ನಾಕೂರು ಶಿರಂಗಾಲ, ಕಲ್ಲೂರು, ಹೆರೂರು, ಕೊಡಗರಹಳ್ಳಿ, ಕಂಬಿಬಾಣೆ ವಿಭಾಗದ ಸರಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜಿನ 1000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿದರು.
ನಂತರ ಮಾತನಾಡಿದ ಅವರು, ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರೇ ಐಎಎಸ್, ಐಪಿಎಸ್ ತೇರ್ಗಡೆಯಾಗಿ ಸರಕಾರಿ ಸೇವೆ ಸಲ್ಲಿಸಿದ್ದಾರೆ. ಇಂದಿನ ವಿದ್ಯಾರ್ಥಿಗಳಲ್ಲಿ ಆಗಾದ ಪ್ರತಿಭೆಯಿದೆ.
ಅದನ್ನು ಗುರುತಿಸಿ ಅವರಿಗೆ ಅಭಿರುಚಿಗೆ ತಕ್ಕ ಶಿಕ್ಷಣ ನೀಡಿದರೆ ಸಮಾಜದ ಆಸ್ತಿಯಾಗಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಕಲಿಕೆಯಲ್ಲಿ ಏಕಾಗ್ರತೆ, ಕಠಿಣ ಪರಿಶ್ರಮ ರೂಡಿಸಿಕೊಳ್ಳಬೇಕು. ಹಾಗಾದಗ ಮಾತ್ರ ಉನ್ನತ ಹುದ್ದೆಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದ, ಬಾಲಗಂಗಾಧರ ತಿಲಕ್, ಸಾವರ್‍ಕರ್, ಚಂದ್ರಶೇಖರ ಅಜಾದ್, ಭಗವತ್‍ಸಿಂಗ್, ಮಹಾತ್ಮಗಾಂಧೀಜಿ ಸೇರಿದಂತೆ ವಿವಿಧ ಆದರ್ಶ ಮಹಾನ್ ವ್ಯಕ್ತಿಗಳ ಪುಸ್ತಕಗಳನ್ನು ವಾಚಿಸುವ ಮೂಲಕ ಅವರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ರವೀಂದ್ರ ಕರೆ ನೀಡಿದರು.
ಸೋಮವಾರಪೇಟೆ ತಾಲೂಕು ಹರಪಳ್ಳಿ ರವೀಂದ್ರ ಅಭಿಮಾನಿ ಸಂಘದ ಅಧ್ಯಕ್ಷ ಹೆಚ್.ಎ.ನಾಗರಾಜು ಮಾತನಾಡಿ, ಎಲೆಮರೆಯ ಕಾಯಿಯಂತೆ ಕಳೆದ 25 ವರ್ಷಗಳಿಂದ ಸಮಾಜದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸುತ್ತಿರುವ ರವೀಂದ್ರ ಅವರು, ಕೆರೆಗಳ ಪುನಶ್ವೇತನ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ. ಬಹುಮುಖ ಸಮಾಜ ಸೇವೆ ಮಾಡುತ್ತಿರುವ ರವೀದ್ರ ಅವರ ಬಡ ವಿದ್ಯಾರ್ಥಿಗಳ ಪಾಲಿಗೆ ಕೊಡುಗೈ ದಾನಿಯಾಗಿದ್ದಾರೆಂದು ಹೇಳಿದರು.
1000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಸಮಾರಂಭದ ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಶಿವಮ್ಮ, ಗ್ರಾ.ಪಂ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರುಗಳಾದ ಆಲಿಕುಟ್ಟಿ, ಶಬ್ಬೀರ್, ಖಾಸಿಂ, ರಫಿಕ್‍ಖಾನ್, ಕೊಡಗು ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿಸೋಮಶೇಖರ್ ಹಾಜರಿದ್ದರು.