ಮಡಿಕೇರಿ ಜೂ.13 : ಕೇಂದ್ರೀಯ ವಿದ್ಯಾಲಯದಲ್ಲಿ “ಸಂಯೋಜಿತ ಕಲಿಕೆಯ ಸಂದರ್ಭದಲ್ಲಿ ಫೌಂಡೇಶನ್ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರವನ್ನು ಖಚಿತಪಡಿಸಿಕೊಳ್ಳುವುದು” ಎಂಬ ವಿಷಯದ ಕುರಿತು ಕೊಡಗು ಜಿಲ್ಲೆಯ ಎಲ್ಲಾ ಶಾಲಾ ಶಿಕ್ಷಕರಿಗೆ, ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ವರ್ಚುವಲ್ ನಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಿತು.
ಮುಖ್ಯ ಶಿಕ್ಷಕಿ ನಿರ್ಮಲ ಪತಾರೆ “ಸಂಯೋಜಿತ ಕಲಿಕೆಯ ಸಂದರ್ಭದಲ್ಲಿ ಫೌಂಡೇಶನ್ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರವನ್ನು ಖಚಿತಪಡಿಸಿಕೊಳ್ಳುವುದು” ಎಂಬ ವಿಷಯದ ಕುರಿತು ಪ್ರಸ್ತುತಪಡಿಸಿದರು. ಇದರ ಪ್ರಯುಕ್ತ ಶಾಲಾಮಕ್ಕಳಿಗೆ ಆಯೋಜಿಸಿದ ವಿವಿಧ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಪ್ರತ್ಯೇಕವಾಗಿ ಕಥೆ ಹೇಳುವುದು, ಪದ್ಯ ವಾಚನ, ಪೋಸ್ಟರ್ ತಯಾರಿಕೆ ಮತ್ತಿತರ ಬಗ್ಗೆ ಚರ್ಚೆ ನಡೆಯಿತು.
ಮುಂದಿನ ದಿನಗಳಲ್ಲಿ ಡಿಜಿಟಲ್ ಎಜುಕೇಶನ್, ಸ್ಟೋರಿ ಮೇಕಿಂಗ್, ಪೋಸ್ಟರ್ ಮೇಕಿಂಗ್, ಜಾಗೃತಿ ಸೆಷನ್, ಎನ್‍ಇಪಿ ಹಾಗೂ ಜಿ-20 ಯ ಕುರಿತು ಭಾಷಣ ಉತ್ತೇಜಿಸುವ ಬಗ್ಗೆ ಚರ್ಚಿಸಲಾಯಿತು.
ಈಗಾಗಲೇ ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ ಪ್ರಾಥಮಿಕ ಹಂತದಲ್ಲಿ ಎನ್‍ಇಪಿ ಯನ್ನು ಅಳವಡಿಸಿರುವ ಬಗ್ಗೆಯೂ ಹಾಗೂ ಮಕ್ಕಳಲ್ಲಿ ಯಾವ ರೀತಿಯ ಸಕಾರಾತ್ಮಕ ಪ್ರಭಾವ ಬೀರುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಲಾಯಿತು. ಶಿಕ್ಷಕರಿಗೆ ಹಾಗೂ ಪೋಷಕರಿಗೆ ಸಂವಾದದಲ್ಲಿ ಭಾಗವಹಿಸಲು ಅವಕಾಶ ನೀಡಲಾಯಿತು. ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಅರ್ಜುನ್ ಸಿಂಗ್ ಸಮೂಹವನ್ನು ಸ್ವಾಗತಿಸಿದರು. ಸಹ ಶಿಕ್ಷಕ ಪ್ರವೀಣ್ ಎಲ್ಲರನ್ನು ವಂದಿಸಿದರು.









