ಮಡಿಕೇರಿ ಜೂ.17 : ಕೊಡಗು ಜಿಲ್ಲೆಯ 104 ಗ್ರಾ.ಪಂ ಗಳಲ್ಲಿ ಖಾಲಿ ಹುದ್ದೆಗಳು ಭರ್ತಿಯಾಗದೆ ಇರುವುದರಿಂದ ಸಾರ್ವಜನಿಕರ ಕೆಲಸ, ಕಾರ್ಯಗಳು ಸ್ತಬ್ಧವಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಗ್ರಾ.ಪಂ ಗಳಲ್ಲಿ ಡಾಟಾ ಎಂಟ್ರಿ ಆಪರೇಟರ್, ಬಿಲ್ ಕಲೆಕ್ಟರ್, ಸ್ವಚ್ಛತಾ ಸಿಬ್ಬಂದಿ, ಅಟೆಂಡರ್, ನೀರುಗಂಟಿಗರು ಸೇರಿದಂತೆ ಸುಮಾರು 180 ಹುದ್ದೆಗಳು ಖಾಲಿ ಇವೆ. ಇವುಗಳನ್ನು ಶೀಘ್ರ ಭರ್ತಿ ಮಾಡುವ ಮೂಲಕ, ಪಂಚಾಯ್ತಿ ವ್ಯಾಪ್ತಿಯಲ್ಲಿ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
::: ಖಾಲಿ ಇರುವ 23 ಪಿಡಿಒ ಹುದ್ದೆ ::: ಜಿಲ್ಲಾ ವ್ಯಾಪ್ತಿಯ ಗ್ರಾ.ಪಂ ಗಳಲ್ಲಿ 23 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಹುದ್ದೆಗಳು ಖಾಲಿ ಇವೆ. ಇದರಿಂದ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪಿಡಿಒಗಳು ಹೆಚ್ಚುವರಿಯಾಗಿ ಇತರೆ ಗ್ರಾಮ ಪಂಚಾಯ್ತಿಗಳ ಜವಾಬ್ದಾರಿಯನ್ನು ನಿರ್ವಹಿಸುವ ಪರಿಸ್ಥಿತಿ ಬಂದೊದಗಿದೆ ಎಂದು ತಿಳಿಸಿದರು.
ಅಗತ್ಯ ಕೆಲಸ ಕಾರ್ಯಗಳಿಗಾಗಿ ಜನ ಪಂಚಾಯ್ತಿಗಳಿಗೆ ನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವ ಸಿಬ್ಬಂದಿಗಳು ಒತ್ತಡದಿಂದ ಕೆಲಸ ಮಾಡಬೇಕಾಗಿದೆ. ಕೇವಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಎಲ್ಲಾ ಕೆಲಸವನ್ನು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
::: ದೊರಕದ ಭಡ್ತಿ ::: ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಹತ್ತರಿಂದ ಇಪ್ಪತ್ತು ವರ್ಷ ಬಿಲ್ ಕಲೆಕ್ಟರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿದ್ದಾರೆ. ಆದರೆ, ಇದುವರೆಗೂ ಅವರಿಗೆ ಭಡ್ತಿ ದೊರೆತ್ತಿಲ್ಲ. ಆದಷ್ಟು ಶೀಘ್ರ ಪಂಚಾಯ್ತಿಗಳಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಭಡ್ತಿ ನೀಡುವ ಕೆಲಸ ಆಗಬೇಕೆಂದು ಪಿ.ಆರ್.ಭರತ್ ಒತ್ತಾಯಿಸಿದರು.
ಜಿಲ್ಲೆಯ ಗ್ರಾಮ ಪಂಚಾಯ್ತಿಗಳಲ್ಲಿ ಲೆಕ್ಕಸಹಾಯಕರ ಹುದ್ದೆ 5, ಕಾರ್ಯದರ್ಶಿಗಳ ಹುದ್ದೆ 8 ಖಾಲಿ ಬಿದ್ದಿವೆ. ಈ ಖಾಲಿ ಹುದ್ದೆಗಳು ಭರ್ತಿಯಾಗದೆ ಪಂಚಾಯ್ತಿಗಳಲ್ಲಿ ಯಾವುದೇ ರೀತಿಯ ಕೆಲಸಗಳು ನಡೆಯುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
::: ಇಕ್ಕಟ್ಟಿನಲ್ಲಿ ಡಾಟಾ ಎಂಟ್ರಿ ಸಿಬ್ಬಂದಿಗಳು ::: ಉದ್ಯೋಗ ಖಾತ್ರಿ ಯೋಜನೆಯಡಿ ಸಹಿ ಅಥವಾ ತಂಬು ಹಾಕುವ ಅಧಿಕಾರ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾತ್ರ ಇದೆ. ಆದರೆ ಯಾವುದೇ ಅಧಿಕಾರವಿಲ್ಲದ ಡಾಟಾ ಎಂಟ್ರಿ ಸಿಬ್ಬಂದಿಗಳಿಗೆ ದಂಡ ವಿಧಿಸುವ ಕಾರ್ಯ ನಡೆಯುತ್ತಿದೆ. ಡಾಟಾ ಎಂಟ್ರಿಗಳಿಗೆ ದಂಡ ಹಾಕುವುದು ಮತ್ತು ತನಿಖೆಗೆ ಒಳಪಡಿಸುವುದನ್ನು ತಕ್ಷಣ ನಿಲ್ಲಿಸಬೇಕೆಂದು ಭರತ್ ಒತ್ತಾಯಿಸಿದರು.
::: ಕನಿಷ್ಟ ವೇತನ ನೀಡಿ ::: ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯ್ತಿಗಳಲ್ಲಿ ದುಡಿಯುತ್ತಿರುವ ನೀರು ನಿರ್ವಾಹಕರು, ಸ್ವಚ್ಛತಾಗಾರರು ಮತ್ತಿತರ ವಿಭಾಗದಲ್ಲಿ ದುಡಿಯುವ ಕಾರ್ಮಿಕರಿಗೆ ಸರ್ಕಾರ ನಿಗಧಿಪಡಿಸಿದ ಕನಿಷ್ಟ ವೇತನವನ್ನು ನೀಡದೆ ಅತ್ಯಂತ ಕಡಿಮೆ ವೇತನದಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಇವರಿಗೆ ಸರ್ಕಾರ ಕಾರ್ಮಿಕ ಕಾನೂನಿನಡಿಯಲ್ಲಿ ನೀಡಬೇಕಾದ ಕನಿಷ್ಟ ವೇತನ ನೀಡಬೇಕೆಂದು ಆಗ್ರಹಿಸಿದರು.
ಸಿಬ್ಬಂದಿಗಳ ಮಾಹಿತಿ ಒದಗಿಸಿ : ಗ್ರಾಮ ಪಂಚಾಯ್ತಿಗಳ ವಿವಿಧ ಹುದ್ದೆಗಳಲ್ಲಿ 2017 ರ ಜನವರಿ 31 ರ ಒಳಗಿನಿಂದ ದುಡಿಯುತ್ತಿರುವ ಸಿಬ್ಬಂದಿಗಳನ್ನು ಏಕ ಕಾಲದಲ್ಲಿ ಅನುಮೋದನೆ ನೀಡಲು ಸರ್ಕಾರ ಉದ್ದೇಶಿಸಿದೆ. ಇದಕ್ಕಾಗಿ ಪಂಚಾಯ್ತಿಗಳಲ್ಲಿ ಎಷ್ಟು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಮಾಹಿತಿ ನೀಡುವಂತೆ ಆರ್‍ಡಿಪಿ ಕಚೇರಿಯಿಂದ ಆದೇಶ ನೀಡಿದ್ದರು, ಜಿಲ್ಲೆಯ ಪಂಚಾಯ್ತಿಗಳು ಈ ಬಗ್ಗೆ ಮಾಹಿತಿ ನೀಡಿಲ್ಲ. ತಕ್ಷಣ ಈ ಮಾಹಿತಿಯನ್ನು ಆಯಾ ಪಂಚಾಯ್ತಿಗಳು ನೀಡಬೇಕು, ಇಲ್ಲವಾದಲ್ಲಿ ಅಲ್ಲಿನ ಸಿಬ್ಬಂದಿಗಳು ಅನ್ಯಾಯಕ್ಕೆ ಒಳಗಾಗುತ್ತಾರೆ ಎಂದು ಭರತ್ ಕಳವಳ ವ್ಯಕ್ತಪಡಿಸಿದರು.
ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ನೂತನ ಸರ್ಕಾರಕ್ಕೆ ಮತ್ತು ಜಿಲ್ಲೆಯ ನೂತನ ಶಾಸಕರಿಗೆ ಮಾಹಿತಿಯನ್ನು ನೀಡಲಾಗುತ್ತದೆ. ಸೂಕ್ತ ಸ್ಪಂದನೆ ದೊರಕದಿದ್ದಲ್ಲಿ ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ನವೀನ್ ಕುಮಾರ್, ಮಡಿಕೇರಿ ತಾಲ್ಲೂಕು ಪದಾಧಿಕಾರಿ ಬಿ.ಕೆ.ಜತ್ತಪ್ಪ ಹಾಗೂ ಕುಶಾಲನಗರ ತಾಲ್ಲೂಕು ಪದಾಧಿಕಾರಿ ಹೆಚ್.ಎಂ.ದಿನೇಶ್ ಉಪಸ್ಥಿತರಿದ್ದರು.









