ಮಡಿಕೇರಿ ಜೂ.17 : ಕಾಲೇಜಿನಲ್ಲಿ ನಡೆಸಲಾಗುವ ವಿವಿಧ ಉತ್ಸವಗಳು ಕೇವಲ ಮನರಂಜನೆಗಾಗಿ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ವಿದ್ಯಾರ್ಥಿಗಳು ಪಾಠ ಪ್ರವಚನದಲ್ಲಿಗಳಿಸುವ ಅಂಕದೊಂದಿಗೆ ಬೆಸ್ಟ್ ಮ್ಯಾನೇಜರ್ ನಂತ ವಿವಿಧ ಚಟುವಟಿಕೆಗಳಲ್ಲಿ ಜಯಶೀಲರಾಗುವುದನ್ನು ಕೂಡ ಇಂದು ಕಂಪನಿಗಳು ಉದ್ಯೋಗಕ್ಕೆ ಪ್ರಮುಖವಾಗಿ ಮಾನ್ಯ ಮಾಡುತ್ತವೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಹಾಗೂ ಮಾಜಿ ಪ್ರಾಂಶುಪಾಲರಾದ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಾಣಿಜ್ಯ ಹಾಗೂ ವ್ಯವಹಾರ ನಿರ್ವಹಣೆ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಉತ್ಸವ ‘ಸಂಕಲ್ಪ-2023’ ನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಹ ಕಲಿಕೆಯಿಂದ ಅವರಲ್ಲಿರುವ ಬಹುಮುಖ ಪ್ರತಿಭೆ ಹೊರಹೊಮ್ಮಿ ಮತ್ತಷ್ಟು ಸೃಜನಶೀಲಾತ್ಮಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ವಿವಿಧ ಕಾಲೇಜಿನಿಂದ ಆಗಮಿಸಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ವಿದ್ಯಾರ್ಥಿಗಳಲ್ಲಿ ಗೆಳೆತನದ ಸಂಪರ್ಕ ಹೆಚ್ಚಾಗುತ್ತದೆಯಲ್ಲದೆ, ಸ್ನೇಹಮಯ ಗುಣ ಜೀವನದ ಪ್ರಗತಿಗೆ ಮತ್ತಷ್ಟು ಮೆರುಗು ಕಲ್ಪಿಸುತ್ತದೆ ಎಂದು ಕಿವಿಮಾತು ಹೇಳಿದರು.
ಕ್ಯಾಪಿಟಲ್ ವಿಲೇಜ್ ಮಾಲೀಕ ದೇವಯ್ಯ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ ಎಂದು ಅಭಿಪ್ರಾಯಪಟ್ಟರಲ್ಲದೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಚೀನಾ, ಜಪಾನ್, ಯುರೋಪ್ ಒಕ್ಕೂಟದ ರಾಷ್ಟ್ರಗಳು ಹೆಚ್ಚು ವಯಸ್ಕ ನಾಗರಿಕರನ್ನು ಹೊಂದಿದ್ದು, ಭಾರತ ಹೆಚ್ಚಿನ ಯುವ ಜನಾಂಗವನ್ನು ಹೊಂದಿದೆ. ಹೀಗಾಗಿ, ಯುವ ಜನಾಂಗ ಉತ್ತಮ ಶಿಕ್ಷಣ ಹೊಂದಿ ಮತ್ತಷ್ಟು ಕ್ರಿಯಾಶೀಲರಾದರೆ ಅದು ವಿಶ್ವಮಟ್ಟದಲ್ಲಿ ಭಾರತದ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಮೇಜರ್. ಡಾ. ಬಿ.ರಾಘವ, ವಿದ್ಯಾರ್ಥಿಗಳಲ್ಲಿನ ಬಹುಮುಖ ಪ್ರತಿಭೆ ಹೊರಹೊಮ್ಮಲು ಇಂತಹಾ ಉತ್ಸವಗಳನ್ನು ವಿವಿಧ ವಿಭಾಗಗಳ ವತಿಯಿಂದ ಆಯೋಜಿಸಲಾಗುತ್ತಿದ್ದು, ಯಾವುದೇ ಅಂಜಿಕೆಯಿಲ್ಲದೆ ಎಲ್ಲಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಕೌಶಲ್ಯ, ನಾಯಕತ್ವ ಗುಣವನ್ನು ಬೆಳೆಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸುವಂತೆ ತಿಳಿಸಿದರು.
ಕಾರ್ಯಕ್ರಮ ಸಂಯೋಜಕರು ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಕೆ.ಶೈಲಶ್ರಿ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಅಪೂರ್ವ ವಂದಿಸಿದರು. ಮತ್ತೋರ್ವ ವಿದ್ಯಾರ್ಥಿ ಸಂಯೋಜಕ ಮಂದಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕ ನಿಖಿಲ್ ನಾಚಪ್ಪ ಅತಿಥಿಗಳನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು, ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಪಾಲ್ಗೊಂಡಿದ್ದರು.