ಮಡಿಕೇರಿ ಜೂ.20 : ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತೆ ಭಾರತೀಯ ವೈದ್ಯಕೀಯ ಸಂಘ ಕೊಡಗು ಶಾಖೆಯ ಅಧ್ಯಕ್ಷ ಹಾಗೂ ರೇಡಿಯಾಲಜಿಸ್ಟ್ ಡಾ. ಚೌರೀರ ಶ್ಯಾಮ್ ಅಪ್ಪಣ್ಣ ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯ, ಕೊಡಗು ವಿಶ್ವವಿದ್ಯಾನಿಲಯ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ವತಿಯಿಂದ ನಡೆದ 74ನೇ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ನಾವು ನೋಡುವ ದೃಷ್ಟಿಕೋನವನ್ನು ಬದಲಾಯಿಸುತ್ತದೆ ಮತ್ತು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸಲು ಕರೆ ನೀಡಿದರು.
ತಂದೆ-ತಾಯಿ ಎಂದಿಗೂ ಮಕ್ಕಳಿಗೆ ಒಳಿತನ್ನು ಬಯಸುವರು ಅವರ ಆಸೆ-ಆಕಾಂಕ್ಷೆಯನ್ನು ನೆರವೇರಿಸಿ ಕೊಡಬೇಕಾದದ್ದು ವಿದ್ಯಾರ್ಥಿಗಳ ಕರ್ತವ್ಯ ಎಂದರು.
ಮೊಬೈಲ್ ಕಡಿಮೆ ಬಳಕೆ ಮಾಡಿ ತಂದೆ, ತಾಯಿ ಕುಟುಂಬ, ಸ್ನೇಹಿತರೊಂದಿಗೆ ಮಾತನಾಡಿ ತಮ್ಮ ಅಮೂಲ್ಯ ಸಮಯವನ್ನು ಕುಟುಂಬದೊಂದಿಗೆ ಕಳೆಯಿರಿ ಎಂದರು.
`ಗಡಿಯಾರವನ್ನು ಕೊಳ್ಳಬಹುದು ಸಮಯವನ್ನು ಕೊಳ್ಳಲು ಸಾಧ್ಯವಿಲ್ಲ, ಕಳೆದುಹೋದ ಸಮಯ ಮರಳಿ ಬರುವುದಿಲ್ಲ. ನಿಮ್ಮ ಅಮೂಲ್ಯ ಸಮಯವನ್ನು ಒಳ್ಳೆಯದಕ್ಕಾಗಿ ಬಳಕೆ ಮಾಡಿ. ಮನೆಯನ್ನು ಕೊಳ್ಳಬಹುದು ಕುಟುಂಬವನ್ನು ಕೊಳ್ಳಲಾಗುವುದಿಲ್ಲ, ಎಲ್ಲರೊಂದಿಗೂ ಪ್ರೀತಿ, ವಿಶ್ವಾಸದಿಂದಿರಿ ಮುಂದೊಂದು ದಿನ ನಿಮ್ಮ ಪ್ರೀತಿ ವಿಶ್ವಾಸ ನಿಮ್ಮನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಉತ್ತಮ ಪರಿಸರದಲ್ಲಿ ಇದ್ದು, ಶಿಕ್ಷಣ, ಕ್ರೀಡೆ, ಸಾಂಸ್ಕøತಿಕ ಹಾಗೂ ವಿವಿಧ ವಿಷಯಗಳಲ್ಲಿ ಹೆಚ್ಚಿನ ಸಾಧನೆ ಮಾಡುತ್ತ ಬಂದಿದೆ. ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು ಕಾಲೇಜು ಹಾಗೂ ಕೊಡಗಿಗೂ ಕೀರ್ತಿ ತರುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಸೀನಪ್ಪ ಮಾತನಾಡಿ, ಕೊಡಗಿನ ಕಾವೇರಿ ಮಾತೆಯ ಮಡಿಲಲ್ಲಿ ಹಚ್ಚ ಹಸಿರಿನ ವಾತಾವರಣದಲ್ಲಿ ನೆಲೆಗೊಂಡ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ತನ್ನ 74ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಮುಂದಿನ ವರ್ಷ ಅತ್ಯಂತ ವಿಜ್ರಂಭಣೆಯಿಂದ ಕಾರ್ಯಕ್ರಮವನ್ನು ಆಚರಿಸುವಂತಾಗಬೇಕು ಎಂದರು.
ಭಾರತೀಯರು ಸಹನ ಶೀಲರು, ವೀರರು, ಮಹಾಚರಿತ್ರೆ ಇರುವ ಭಾರತದಲ್ಲಿ ಸುದೀರ್ಘ ಚರಿತ್ರೆಹೊಂದಿರುವ ಕನ್ನಡ ನಾಡಿನ ಹುಟ್ಟಿರುವುದೇ ಧನ್ಯ. ಭಾರತದಲ್ಲಿ ಯುವ ಶಕ್ತಿ ಹೆಚ್ಚಿದ್ದು, ದೇಶವನ್ನು ಕಟ್ಟುವ ಜವಾಬ್ದಾರಿ ಹೊಂದಿದ್ದಲ್ಲಿ ಸದೃಢ ದೇಶವಾಗುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ನಮ್ಮ ನಾಡಿನ ಮಹನೀಯರ ಚಿಂತನೆ, ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಬಹುದು ಎಂದು ಸಲಹೆ ನೀಡಿದರು.
ಪೋಷಕರು, ಹಾಗೂ ಶಿಕ್ಷಕರು ಇಂದಿನ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಆಗಬೇಕು. ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು.
ಪ್ರಸ್ತುತ ದಿನಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಕೆಲಸವರು ಮಾತ್ರ ಉದ್ಯೋಗಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಉದ್ಯೋಗ ಪಡೆದವರು ತಮ್ಮೊಂದಿಗೆ ಇತರ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸುವಂತೆ ಸಲಹೆ ನೀಡಿದ ಅವರು, ವಿದ್ಯಾರ್ಥಿಗಳು ತಂದೆ, ತಾಯಿ, ಗುರು ಹಾಗೂ ಸಮಾಜವನ್ನು ಬೆಳೆಸಿದಷ್ಟು ಉತ್ತಮ ಭವಿಷ್ಯ ದೊರೆಯಲಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶಿಸ್ತು ಬದ್ಧ ಜೀವನದ ಮೂಲಕವೇ ಇತರರಿಗೆ ಮಾದರಿಯಾಗಬೇಕು ಎಂದ ಅವರು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಕೊಡಗು ವಿಶ್ವವಿದ್ಯಾಲಯದ ಅಧೀನದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಎಪ್ಪತ್ತೈದು ವರ್ಷಗಳನ್ನು ಪೂರೈಸುತ್ತಿದ್ದು, ಅತ್ಯಂತ ವಿಜ್ರಂಭಣೆಯಿಂದ ಕಾರ್ಯಕ್ರಮವನ್ನು ನಡೆಸಲಾಗುವುದೆಂದರು ತಿಳಿಸಿದರು.
ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎನ್ಸಿಸಿ, ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳಲ್ಲಿ ಅಧಿಕ ಅಂಕ ಪಡೆದ ಹಾಗೂ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭ ವಿದ್ಯಾರ್ಥಿ ಸಂಘದ ಸಲಹೆಗಾರ ಬಿ.ಹೆಚ್.ತಳವಾರ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸಹ ಪಠ್ಯೇತರ ಚಟುವಟಿಕೆಯ ಸಂಚಾಲಕಿ ಡಾ.ಹೆಚ್.ಕೆ.ರೇಣುಶ್ರೀ, ಪೋಷಕರ ಸಂಘದ ಮುಖ್ಯಸ್ಥೆ ಅಶ್ವಿನಿ ಹಾಗೂ ಕಾಲೇಜಿ ಉಪನ್ಯಾಸಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.ಆಂಗ್ಲ ವಿಭಾಗದ ಮುಖ್ಯಸ್ಥ ಡಾ.ಪೂಣಚ್ಚ ಕಾಲೇಜಿನ ಪ್ರಸಕ್ತ ಸಾಲಿನ ಕಾರ್ಯಚಟುವಟಿಕೆಯ ವರದಿಯನ್ನು ವಾಚಿಸಿದರು.
ವಿದ್ಯಾರ್ಥಿ ಸವಿತ ನಿರೂಪಿಸಿದರು, ಕಾಲೇಜು ನಾಯಕಿ ಹೆಚ್.ಜಿ.ಅಪೂರ್ವ ಸರ್ವರನ್ನು ವಂದಿಸಿದರು.










