ಮಡಿಕೇರಿ ಜೂ.20 : `ಅನ್ನಭಾಗ್ಯ’ ಯೋಜನೆಯಡಿ ಹತ್ತು ಕೆ.ಜಿ.ಅಕ್ಕಿ ವಿತರಿಸುವ ರಾಜ್ಯ ಸರ್ಕಾರದ ಯೋಜನೆಯ ಜಾರಿಗೆ ಅಗತ್ಯವಾದ ಅಕ್ಕಿಯನ್ನು ಪೂರೈಸಲು ಕೇಂದ್ರ ಸರ್ಕಾರ ನಕಾರಾತ್ಮಕ ಧೋರಣೆ ತಳೆದಿರುವುದನ್ನು ಖಂಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ನಗರದಲ್ಲಿ ಪ್ರತಿಭಟನೆ ನಡೆಸಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಕಾಂಗ್ರೆಸ್ ಪ್ರಮುಖರು, ಕಾರ್ಯಕರ್ತರು ಸಮಾವೇಶಗೊಂಡು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಅದರಂತೆ ಅಧಿಕಾರಕ್ಕೆ ಬಂದ ಬಳಿಕ ಅವುಗಳನ್ನು ಈಡೇರಿಸಲು ಮೊದಲ ಶಾಸಕಾಂಗ ಸಭೆಯಲ್ಲೆ ಅನುಮೋದನೆಯನ್ನು ನೀಡಲಾಗಿತ್ತು.ಗ್ಯಾರಂಟಿಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯಡಿ ಪ್ರತಿ ಬಿಪಿಎಲ್ ಪಡಿತರದಾರರಿಗೆ ತಲಾ 10 ಕೆ.ಜಿ. ಅಕ್ಕಿ ವಿತರಿಸಲು ಸರ್ಕಾರ ಕಾರ್ಯ ಯೋಜನೆಗಳನ್ನು ಅದಾಗಲೆ ರೂಪಿಸಿದೆ. ಆದರೆ, ಇದನ್ನು ಕಾರ್ಯಗತಗೊಳಿಸಬಾರದೆನ್ನುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಯೋಜನೆಯ ಪೂರೈಕೆಗೆ ಅಗತ್ಯವಾದ ಅಕ್ಕಿ ವಿತರಣೆಗೆ ಅಸಹಕಾರ ತೋರುತ್ತಿರುವುದಾಗಿ ಕಾಂಗ್ರೆಸ್ ಪ್ರಮುಖರು ತೀವ್ರ ಅಸಮಾಧಾನ ಹೊರ ಹಾಕಿದರು.
ಪ್ರತಿಭಟನೆ ಬಳಿಕ ಜಿಲ್ಲಾಡಳಿತಕ್ಕೆ ನೀಡಿದ ಮನವಿ ಪತ್ರದಲ್ಲಿ, ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಪ್ರತಿ ತಿಂಗಳು 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆಯನ್ನು ಇದೇ ಜುಲೈ 1 ರಿಂದ ಜಾರಿಗೊಳಿಸುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಅದಕ್ಕೆ ಅನುಗುಣವಾಗಿ ಕೇಂದ್ರ ಆಹಾರ ನಿಗಮದೊಂದಿಗೆ ಪತ್ರ ವ್ಯವಹಾರ ನಡೆಸಿ ಒಪ್ಪಿಗೆಯನ್ನು ಪಡೆಯಲಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರದ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಚಿತಾವಣೆಯ ಫಲವಾಗಿ ಅನ್ನಭಾಗ್ಯ ಯೋಜನೆಯನ್ನು ವಿಫಲಗೊಳಿಸಲು ಅಕ್ಕಿಯನ್ನು ಒದಗಿಸುತ್ತಿಲ್ಲವೆಂದು ಆರೋಪಿಸಲಾಗಿದೆ.
ಡಬಲ್ ಇಂಜಿನ್ ಸರ್ಕಾರ ಎಂದು ಪ್ರಚಾರ ಮಾಡಿದವರು ಬೇರೆ ಪಕ್ಷದ ಸರ್ಕಾರ ಎಂದಾಕ್ಷಣ ರಾಜ್ಯದ ಜನರಿಗೆ ತಲುಪಬೇಕಾದ ಯೋಜನೆಯನ್ನು ತಡೆಹಿಡಿಯುವುದು ಮಲತಾಯಿ ಧೋgಣೆಯೇ ಆಗಿದೆಯೆಂದು ಮನವಿಯಲ್ಲಿ ಆರೋಪಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರದ ಬೇಡಿಕೆಯಂತೆ ಅಕ್ಕಿಯನ್ನು ಕೇಂದ್ರ ಆಹಾರ ನಿಗಮದ ಮೂಲಕ ಖರೀದಿಸಿ ಬಡವರಿಗೆ ನೀಡುವ ಯೋಜನೆಯನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರ ಅನುವು ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಟಿ.ಪಿ.ರಮೇಶ್, ಪ್ರಮುಖರಾದ ಕೊಲ್ಯದ ಗಿರೀಶ್, ಸುರಯ್ಯಾ ಅಬ್ರಾರ್, ನಗರಸಭಾ ಮಾಜಿ ಅಧ್ಯಕ್ಷರಾದ ಕೂಡಕಂಡಿ ಕಾವೇರಮ್ಮ ಸೋಮಣ್ಣ, ಜುಲೇಕಾಬಿ, ಕೆ.ಜೆ. ಪೀಟರ್, ಪ್ರಕಾಶ್ ಆಚಾರ್ಯ, ರಾಜೇಶ್ ಯಲ್ಲಪ್ಪ, ಕೆ.ಯು. ಅಬ್ದುಲ್ ರಜಾಕ್, ಬಿ.ಎನ್. ಪ್ರಥ್ಯು, ಹಂಸ, ಎಸ್.ಐ. ಮುನೀರ್ ಅಹಮ್ಮದ್, ಉದಯ ಕುಮಾರ್, ಚಂದ್ರಶೇಖರ್, ಕಾನೆಹುತ್ಲು ಮೊಣ್ಣಪ್ಪ, ಹೊಸೂರು ಸೂರಜ್ ಮೊದಲಾದವರು ಪಾಲ್ಗೊಂಡಿದ್ದರು.








