ಮಡಿಕೇರಿ ಜೂ.20 : ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹೀಗೆ ವಿವಿಧ ಪಿಂಚಣಿಯನ್ನು ಕೊಡಗು ಜಿಲ್ಲೆಯಲ್ಲಿ ಒಟ್ಟು 69,473 ಫಲಾನುಭವಿಗಳಿಗೆ ಈಗಾಗಲೇ ವಿತರಿಸಲಾಗಿದ್ದು, ಈ ಪಿಂಚಣಿಯನ್ನು ಸಂಬಂಧಿಸಿದ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.
ಆದರೆ ಜೂನ್, 2023 ರಿಂದ ಸಾಮಾಜಿಕ ಭದ್ರತಾ ಯೋಜನೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು ಫಲಾನುಭವಿಗಳಿಗೆ ಪಾವತಿಸುತ್ತಿರುವ ಪಿಂಚಣಿಯನ್ನು ಆಧಾರ್ ನಂಬರ್ ಆಧಾರಿತ ಪಾವತಿಯನ್ನಾಗಿಸಲು ತೀರ್ಮಾನಿಸಿದ್ದು, ಈ ತೀರ್ಮಾನದಂತೆ ಆಧಾರ್ ನಂಬರನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದೇ ಇರುವ ಎನ್‍ಪಿಸಿಐ ಮ್ಯಾಪಿಂಗ್ ಆಗದೇ ಇರುವ ಹಾಗೂ ಬ್ಯಾಂಕ್/ ಅಂಚೆ ಕಚೇರಿಯಲ್ಲಿ ಚಾಲನೆಯಲ್ಲಿಲ್ಲದಿರುವ ಖಾತೆಗಳಿಗೆ ಪಿಂಚಣಿ ಪಾವತಿಯಾಗುವುದಿಲ್ಲ. ಈ ಕಾರ್ಯವನ್ನು ಜೂ.25 ರ ಒಳಗೆ ಫಲಾನುಭವಿಗಳು ಸರಿಪಡಿಸಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಅಂತಹ ಒಟ್ಟು 5,949 ಫಲಾನುಭವಿಗಳಿದ್ದು, ಈ ಫಲಾನುಭವಿಗಳ ಪಟ್ಟಿಯನ್ನು ನಿರ್ದೇಶನಾಲಯದಿಂದ ಕಳುಹಿಸಲಾಗಿದ್ದು, ತಾಲ್ಲೂಕುವಾರು ವಿವರ ಇಂತಿದೆ: ಮಡಿಕೇರಿ 1,470, ವಿರಾಜಪೇಟೆ 976, ಪೊನ್ನಂಪೇಟೆ 888, ಕುಶಾಲನಗರ 1091 ಮತ್ತು ಸೋಮವಾರಪೇಟೆ 1524 ಇದ್ದು, ಈ ಫಲಾನುಭವಿಗಳ ಹೆಸರು ಹಾಗೂ ಮಾಹಿತಿಯು ಸಂಬಂಧಿಸಿದ ಕಂದಾಯ ನಿರೀಕ್ಷಕರ ಕಚೇರಿಗಳಲ್ಲಿ ಲಭ್ಯವಿದೆ. ಪಟ್ಟಿಯಲ್ಲಿರುವ ಫಲಾನುಭವಿಗಳು ತಮ್ಮ ಖಾತೆ ಇರುವ ಬ್ಯಾಂಕ್/ ಅಂಚೆ ಕಚೇರಿಗೆ ತೆರಳಿ ತುರ್ತಾಗಿ ಈ ಕೂಡಲೇ ತಮ್ಮ ಆಧಾರ್ ನಂಬರನ್ನು ಬ್ಯಾಂಕ್ ಖಾತೆಗೆ ಲಿಂಕ್, ಎನ್‍ಪಿಸಿಐ ಮ್ಯಾಪಿಂಗ್ ಮಾಡಿಸಿ ಹಾಗೂ ಬ್ಯಾಂಕ್/ ಅಂಚೆ ಕಚೇರಿ ಖಾತೆಯು ಚಾಲನೆಯಲ್ಲಿಲ್ಲದಿದ್ದರೆ ಈ ಖಾತೆಯನ್ನು ಫಲಾನುಭವಿಗಳು ಚಾಲನೆ ಮಾಡಿಸಿಕೊಳ್ಳುವುದು. ಅಥವಾ ಕಂದಾಯ ಪರಿವೀಕ್ಷಕರು / ಗ್ರಾಮ ಆಡಳಿತ ಅಧಿಕಾರಿಗಳಿಗೆ ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಮೊದಲ ಪುಟದ ಜೆರಾಕ್ಸ್ ಪ್ರತಿ ಮತ್ತು ಆಧಾರ್‍ನೊಂದಿಗೆ ಬ್ಯಾಂಕ್ ಖಾತೆ ಲಿಂಕ್ ಮಾಡಲು ಒಪ್ಪಿಗೆ ಪ್ರತಿ ನೀಡುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.









