ಮಡಿಕೇರಿ ಜೂ.22 : ಮಳೆಗಾಲ ಆರಂಭಗೊಂಡು ಮೂರು ವಾರಗಳು ಕಳೆದ ನಂತರ ಕಾವೇರಿನಾಡು ಕೊಡಗು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ. ಮಳೆಯ ಕೊರತೆಯಿಂದ ಹತಾಶರಾಗಿದ್ದ ಜಿಲ್ಲೆಯ ಜನರಲ್ಲಿ ಕೊಂಚ ನೆಮ್ಮದಿ ಮೂಡಿದೆ.
ಜಿಲ್ಲೆಯಲ್ಲಿ ಜೂನ್ ಆರಂಭದೊಂದಿಗೆ ಮುಂಗಾರು ಪ್ರವೇಶ ಸಾಮಾನ್ಯವಾಗಿದ್ದರು, ಇತ್ತೀಚಿನ ವರ್ಷಗಳಲ್ಲಿ ಮುಂಗಾರು ಮಳೆಯ ಚಿತ್ರಣ ನಿಧಾನವಾಗಿ ಬದಲಾಗುತ್ತಿದೆ. ಮಳೆಯ ಪ್ರಮಾಣ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಜೂನ್ ತಿಂಗಳ ನಾಲ್ಕನೇ ವಾರವಾದರು ಕಾಣಿಸದಿದ್ದ ಮಳೆ, ಗುರುವಾರ ಕಾಣಿಸಿಕೊಂಡಿದೆ. ದಟ್ಟವಾಗಿ ಕವಿದ ಮೋಡಗಳು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಳೆಯನ್ನು ಸುರಿಸುತ್ತಿದ್ದು, ಹಠಾತ್ತನೆ ಆರಂಭಗೊಂಡ ಮಳೆಯಿಂದ ನಗರದ ಜನ ಸಂಚಾರಕ್ಕೆ ಕೊಂಚ ಅಡಚಣೆ ಉಂಟಾಯಿತು. ಬೆಟ್ಟಗುಡ್ಡಗಳಲ್ಲಿ ಮಂಜು ಮುಸುಕ್ಕಿದ್ದು, ಚಳಿಯ ವಾತಾವರಣವಿದೆ.
ಬೆಳಗ್ಗಿನ ಅವಧಿಯಲ್ಲಿ ಕಾಣಿಸಿಕೊಂಡ ನೀಲ ಆಕಾಶ, ಬಿಸಿಲ ವಾತಾವರಣ ಮಧ್ಯಾಹ್ನದ ಬಳಿಕ ಬದಲಾಗಿ, ಕಾರ್ಮೋಡಗಳು ಕವಿದು ಸಾಧಾರಣ ಮಳೆ ಮುಂದುವರೆದಿದೆ.
ಜಿಲ್ಲೆಯ ಸಿದ್ದಾಪುರ, ಸುಂಟಿಕೊಪ್ಪ, ಕುಶಾಲನಗರ ಹೀಗೆ ಬಹುತೇಕ ಭಾಗಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.









