ಮಡಿಕೇರಿ ಜೂ.24 : ಮಾಹಿತಿ ಸಂವಹನ ತಂತ್ರಜ್ಞಾನ ದಿನದಿಂದ ದಿನಕ್ಕೆ ಪ್ರಗತಿ ಹೊಂದುತ್ತಿದ್ದು, ವಿದ್ಯಾರ್ಥಿಗಳು ಚಾಟ್ ಜಿಪಿಟಿ, ಆರ್ಟಿಫಿಷಲ್ ಇಂಟಲಿಜೆನ್ಸ್ ನಂತಹಾ ತಂತ್ರಜ್ಞಾನದಲ್ಲಿ ಪರಿಣಿತರಾದರೆ ಉತ್ತಮ ಭವಿಷ್ಯವಿದೆ ಎಂದು ಎವರ್ ಗ್ರೀನ್ ಕೌಂಟಿ ಕೂರ್ಗ್ ರೆಸಾರ್ಟ್ ಮಾಲೀಕ ಹಾಗೂ ನವ ಉದ್ಯಮಿ ಬಜನ್ ಬೋಪಣ್ಣ ಅಭಿಪ್ರಾಯಪಟ್ಟರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಉತ್ಸವ ‘ಸಮನ್ವಯ’ ಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಆಸಕ್ತಿ ದಾಯಕ ವಿಷಯಗಳನ್ನು ಕಲಿಯಲು ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ವಿಫುಲ ಅವಕಾಶಗಳಿದ್ದು, ಎಲ್ಲವನ್ನೂ ಬಳಸಿಕೊಂಡು ಪರಿಣಿತಿ ಹೊಂದಿದರೆ ಮಾತ್ರ ಉತ್ತಮ ಭವಿಷ್ಯ ಇದೆ ಎಂದು ತಿಳಿಸಿದ ಅವರು, ಸೋಲನ್ನು ಸವಾಲಾಗಿ ಸ್ವೀಕರಿಸಲು ಮನಸ್ಸಿಲ್ಲದವರು ಉದ್ಯಮ ಆರಂಭಿಸುವ ಸಾಹಸಕ್ಕೆ ಕೈ ಹಾಕಬೇಡಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೋರ್ವ ಅತಿಥಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಸಂಪನ್ಮೂಲಗಳು ಸಾಕಷ್ಟು ಲಭ್ಯವಿದ್ದು, ಗುರುಗಳ ಅನುಭವ, ಜ್ಞಾನ ಮತ್ತು ಗ್ರಂಥಾಲಯವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕಾಲೇಜು ಶಿಕ್ಷಣ ಅವಧಿ ಒಂದು ಸುಸಂದರ್ಭವಾಗಿದ್ದು, ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ. ಬಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ತಾಳ್ಮೆ, ಆತ್ಮವಿಶ್ವಾಸ ಹಾಗೂ ಶಿಸ್ತನ್ನು ಮೈಗೂಡಿಸಿಕೊಂಡರೆ ಅದು ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ ಸಂಯೋಜಕರಾದ ಪ್ರೊ. ಎ. ಗಾಯತ್ರಿದೇವಿ ಅವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮ ಸಹಸಂಯೋಜಕರಾದ ಡಾ. ಹೆಚ್.ಕೆ. ರೇಣುಶ್ರೀ ವಂದಿಸಿದರು.
ಕೊಡಗು ಹಾಗೂ ಹೊರಜಿಲ್ಲೆಗಳ ವಿವಿಧ ಕಾಲೇಜುಗಳಿಂದ ಸುಮಾರು 38 ತಂಡಗಳು ಆಗಮಿಸಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.