ಮಡಿಕೇರಿ ಜೂ.24 : ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ 19ನೇ ವರ್ಷದ ಪದಗ್ರಹಣ ಸಮಾರಂಭವು ಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಿತು.
ನಿವೃತ್ತ ಪ್ರಾಂಶುಪಾಲ ಮಲ್ಚಿರ ಕೆ.ಕಾರ್ಯಪ್ಪ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೊಡವ ಸಮಾಜ ಹಾಗೂ ಶಾಲೆಯ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಆಯ್ಕೆಯಾದ ಶಾಲಾ ನಾಯಕರಿಗೆ ಪದಕ ಪ್ರದಾನ ಮಾಡಿದರು.
ಪ್ರಾಂಶುಪಾಲರಾದ ಬಿ.ಎಂ.ಸರಸ್ವತಿ ಚಂಗಪ್ಪ ವಿದ್ಯಾರ್ಥಿ ನಾಯಕರುಗಳಿಗೆ ಪ್ರಮಾಣವಚನ ಬೋಧಿಸಿದರು.
ಶಾಲೆಯ ಕಾರ್ಯಾಧ್ಯಕ್ಷ ನಂದಿನೆರವಂಡ ಚೀಯಣ್ಣ, ಸಾಹಿತ್ಯ ಸಂಘ, ಮಡಿಕೇರಿ ಕೊಡವ ಸಮಾಜದ ಜಂಟಿಕಾರ್ಯದರ್ಶಿ ನಂದಿನೆರವಂಡ ದಿನೇಶ್ ವಿಜ್ಞಾನಸಂಘ, ನಿರ್ದೇಶಕರಾದ ಬೊಪ್ಪಂಡ ಸರಳಾಕರುಂಬಯ್ಯ ಕಲಾಸಂಘವನ್ನು ಹಾಗೂ ಕೊಡವ ಸಮಾಜದ ಕಾರ್ಯದರ್ಶಿ ಕನ್ನಂಡ ಸಂಪತ್ ಕುಮಾರ್ ಕ್ವಿಜ್ ಸಂಘವನ್ನು ಉದ್ಘಾಟಿಸಿದರು.
ನಂತರ 2022-23ನೇ ಸಾಲಿನ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರು, ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.









