ಮಡಿಕೇರಿ ಜು.7 : ಕೊಡಗು ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ 24 ಗಂಟೆಗಳಲ್ಲಿ 14 ಇಂಚು ಮಳೆಯಾಗಿದೆ.
ಮಡಿಕೇರಿ ತಾಲ್ಲೂಕು ಭಾಗಮಂಡಲ ಹೋಬಳಿ ಚೇರಂಗಾಲ ಗ್ರಾಮದ ಮತ್ತಾರಿ ಸೇತುವೆ ಮಳೆಯಿಂದ ಮುಳುಗಡೆಯಾಗಿದೆ. ಈ ಭಾಗದಲ್ಲಿ ಒಟ್ಟು 15 ಮನೆಗಳಿದ್ದು, 65 ಮಂದಿ ವಾಸವಾಗಿದ್ದಾರೆ. ಹಾನಿ ಪ್ರದೇಶವನ್ನು ಮಡಿಕೇರಿ ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಪರಿಶೀಲಿಸಿದರು.
ಹಾಗೆಯೇ ಭಾಗಮಂಡಲ ತ್ರಿವೇಣಿ ಸಂಗಮ, ಭಾಗಮಂಡಲ -ನಾಪೋಕ್ಲು ರಸ್ತೆಗೆ ಬಂದಿರುವ ನೀರಿನ ಮಟ್ಟವನ್ನು ವೀಕ್ಷಿಸಿದರು. ಭಾಗಮಂಡಲ ಗ್ರಾಮದಲ್ಲಿರುವ ಕಾಶಿ ಮಠದಲ್ಲಿ ಕಾಳಜಿ ಕೇಂದ್ರ ನಡೆಸಲು ಸಿದ್ಧತೆ ಯಾಗಿದ್ದು, ಹೆಚ್ಚಿನ ಮಳೆ ಆದಲ್ಲಿ ಸಂತ್ರಸ್ತರನ್ನು ಕಾಳಜಿ/ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾಗಮಂಡಲ – ನಾಪೋಕ್ಲು ರಸ್ತೆಯ ಮೇಲೆ ಅಂದಾಜು 2 ಅಡಿ ನೀರು ಬಂದಿದೆ. ಗೃಹ ರಕ್ಷಕ ದಳದ ತಂಡವು ಬೋಟ್ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ತಹಶೀಲ್ದಾರ್ ಹೇಳಿದ್ದಾರೆ.
ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಭಾಗಮಂಡಲ ಸೇರಿದಂತೆ ಕಾವೇರಿ ನದಿಯ ತಪ್ಪಲಿನಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಪೋಕ್ಲು ಬಳಿಯ ಕಾವೇರಿ ನದಿಯ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ.
ನಾಪೋಕ್ಲು ವಿಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಬರೆಕುಸಿತ ಮತ್ತು ಕೆಲವೆಡೆ ತೋಟಗಳಲ್ಲಿ ಮರದ ಕೊಂಬೆಗಳು ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತೆಯ ಕೂಡ ಉಂಟಾಗಿದೆ. ಸಮೀಪದ ಬಲಮುರಿ ಗ್ರಾಮದಲ್ಲಿರುವ ಸಣ್ಣ ಸೇತುವೆ ಕಾವೇರಿ ನದಿ ಪ್ರವಾಹದಿಂದ ಮುಳುಗಡೆಯಾಗಿದೆ. ಅದರಂತೆ ಕೊಳಕೇರಿ ಗ್ರಾಮದಲ್ಲಿರುವ ಚಪ್ಪೆಂಡಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳುವ ರಸ್ತೆಯ ಬದಿಯಲ್ಲಿರುವ ಬರೆ ಕುಸಿದಿದ್ದು ಪಕ್ಕದಲ್ಲಿರುವ ವಿದ್ಯುತ್ ಕಂಬ ಬೀಳುವ ಸ್ಥಿತಿಯಲ್ಲಿದೆ.
ನಾಪೋಕ್ಲು ಸುತ್ತಮುತ್ತಲಿನ ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ, ಕೊಳಕೇರಿ ಚೆರಿಯಪರಂಬು, ಕೈಕಾಡು, ಹೊದವಾಡ ಸೇರಿದಂತೆ ವ್ಯಾಪ್ತಿಯ ಎಲ್ಲಾ ಗ್ರಾಮಳಲ್ಲಿರುವ ಹೊಳೆ, ತೊರೆ, ಹಳ್ಳ ಕೊಳ್ಳೆಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ದಕ್ಷಿಣ ಕೊಡಗಿನಲ್ಲೂ ಉತ್ತಮ ಮಳೆಯಾಗಿದ್ದು, ನದಿತೀರ ಮತ್ತು ಬೆಟ್ಟಗುಡ್ಡದ ನಿವಾಸಿಗಳು ಸುರಕ್ಷಿತರಾಗಿರುವಂತೆ ಈ ಭಾಗದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮಡಿಕೇರಿ ನಗರದಲ್ಲೂ ಮಳೆಹಾನಿಯಾಗಿದ್ದು, ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ನಡೆಸಿದೆ.