ಮಡಿಕೇರಿ ಜು.7 : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಡಿಕೇರಿ ನಗರದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕರ ಆಸ್ತಿಗೆ ಹಾನಿಯಾಗಿದೆ. ಹಾನಿ ಪ್ರದೇಶಗಳಿಗೆ ನಗರಸಭಾ ಅಧ್ಯಕ್ಷೆ ಅನಿತಾಪೂವಯ್ಯ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮನೆಯ ಗೋಡೆಗೆ ತಡೆಗೋಡೆ ಕುಸಿದ ರಾಣಿಪೇಟೆ, ಜಲಾವೃತಗೊಂಡು ಹಾನಿಗೊಳಗಾದ ಪ್ರದೇಶ ಹಾಗೂ ರಸ್ತೆಗಳನ್ನು ಪರಿಶೀಲಿಸಿದರು. ತೋಡು ಮತ್ತು ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳುವ ಮೂಲಕ ಹೆಚ್ಚಿನ ಅಪಾಯವನ್ನು ತಪ್ಪಿಸಲಾಗುವುದು ಎಂದು ತಿಳಿಸಿದರು.
ಬೆಟ್ಟಗುಡ್ಡ ಮತ್ತು ತಗ್ಗು ಪ್ರದೇಶದ ನಿವಾಸಿಗಳು ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು. ಹಾನಿಗೊಳಗಾದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಎನ್‌ಡಿಆರ್‌ಎಫ್ ತಂಡದ ಸಹಕಾರ ಪಡೆದರು.
ವಿವಿಧ ವಾರ್ಡ್ಗಳ ಭೇಟಿ ಸಂದರ್ಭ ಉಪಾಧ್ಯಕ್ಷೆ ಸವಿತಾ ರಾಕೇಶ್, ಪೌರಾಯುಕ್ತ ವಿಜಯ, ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.











