ಕುಶಾಲನಗರ, ಜು.11: ಉತ್ತರ ಕೊಡಗಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು
(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚುನಾವಣಾ ಅರಿವು ಮೂಡಿಸಲು ಹಾಗೂ
ವಿದ್ಯಾರ್ಥಿ ಸಂಘದ ರಚನೆಗಾಗಿ ಶಾಲಾ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ
ವಿದ್ಯಾರ್ಥಿಗಳಿಗೆ ಶಾಲಾ ಸಂಸತ್ ಚುನಾವಣೆ ನಡೆಸಲಾಯಿತು.
ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ನಡೆಯಲಿರುವ ಸಾರ್ವಜನಿಕ ಚುನಾವಣೆ ಮಾದರಿಯಲ್ಲಿ ಶಾಲೆಯಲ್ಲಿ ಸಂಸತ್ತು ಚುನಾವಣೆ ಭಾಗಬಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಮತಗಟ್ಟೆಯ ಅಧ್ಯಕ್ಷಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ವಿದ್ಯಾರ್ಥಿ ಸಂಘದ ರೆಕ್ಟರ್ , ಸಾಕ್ಷರತಾ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಎಸ್.ಎಂ.ಗೀತಾ,
ಶಿಕ್ಷಕ ಕೆ.ಗೋಪಾಲಕೃಷ್ಣ, ದಯಾನಂದ ಪ್ರಕಾಶ್, ಬಿ.ಡಿ.ರಮ್ಯ, ಬಿ.ಎಸ್.ಅನ್ಸಿಲಾ ರೇಖಾ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.
ಮಕ್ಕಳು ಇವಿಎಂ ಮತಯಂತ್ರದ ಮೂಲಕ ಮತ ಚಲಾಯಿಸಿ ಶಾಲಾ ಸಂಸತ್ತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿರುವುದು ಎಲ್ಲರ ಗಮನ ಸೆಳೆಯಿತು.
ಶಾಲಾ ಸಂಸತ್ತು ರಚನೆ ಮಾಡಿ ಚುನಾವಣೆ ಪ್ರಕ್ರಿಯೆ ಅರಿತುಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಉಪಕರಣಗಳ ಬಳಕೆಯ ಮೂಲಕ ಚುನಾವಣೆಗೆ ಮೆರುಗು ತರಲಾಯಿತು.
ನಂತರ ರಿಟರ್ನಿಂಗ್ ಆಫೀಸರ್‌ಗಳ ನೇಮಕ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಉಮೇದುವಾರಿಕೆ
ಸಲ್ಲಿಸಲು ಅವಕಾಶ ನೀಡಲಾಯಿತು.
ಚುನಾವಣೆಗೆ ಬೇಕಾದ ಸಿಬ್ಬಂದಿ ನೇಮಕ, ಪೊಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಹೀಗೆ ಪ್ರತಿಯೊಂದು ಪಾತ್ರಗಳನ್ನು ನಿರ್ವಹಿಸಲಾಗಿತ್ತು.
ಶಾಲಾ ಅಂಗಳದಲ್ಲಿ ರೂಪಿಸಿದ್ದ ಮತದಾನ ಕೇಂದ್ರದ ಮತಗಟ್ಟೆಯಲ್ಲಿ
ವಿದ್ಯಾರ್ಥಿಗಳು ಇ.ವಿ.ಎಂ.ಮಾದರಿಯ ಮತಯಂತ್ರದಲ್ಲಿ
ಮತ ಚಲಾಯಿಸಿದರು.
ಶಿಕ್ಷಕಿ ಎಸ್.ಎಂ.ಗೀತಾ ಮೊಬೈಲ್ ಆ್ಯಪ್ ಬಳಕೆ ಮಾಡಿಕೊಂಡು ಮತಯಂತ್ರ ಮತ್ತು ಕಂಟ್ರೋಲ್ ಯೂನಿಟ್ ಗಳನ್ನು ವಿನ್ಯಾಸಗೊಳಿಸಿದ್ದು ಗಮನ ಸೆಳೆಯಿತು.
ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಮಾದರಿಯಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆತ, ಪ್ರಚಾರಕ್ಕೆ ಅವಕಾಶ, ಮತದಾನ, ಫಲಿತಾಂಶ ಘೋಷಣೆ ಹೀಗೆ ಎಲ್ಲ ಹಂತಗಳನ್ನು ಶಾಲಾ ಸಂಸತ್ತಿನ ಚುನಾವಣೆಯ ಪ್ರಕ್ರಿಯೆಯನ್ನು ರೂಪಿಸಲಾಗಿತ್ತು.
ಪ್ರಜಾಪ್ರಭುತ್ವ ಮಾದರಿಯಲ್ಲಿ ಯಾವ ರೀತಿ ಇವಿಎಂ ಬಳಸಿಮತ ಚಲಾವಣೆ ಮಾಡಲಾಗುತ್ತದೆ ? ಈ ಹಿಂದೆ ಬಳಸುತ್ತಿದ್ದ ಬ್ಯಾಲೆಟ್ ಪೇಪರ್ ಗಳನ್ನು ಬಳಸಿ ಯಾವ ರೀತಿ ಮತ ಚಲಾವಣೆ ಮಾಡಲಾಗುತ್ತಿತ್ತು ಎಂಬ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿವರಿಸಿದರು.
ಚುನಾವಣೆ ಪ್ರಕ್ರಿಯೆ ಮುಕ್ತಾಯವಾದ ನಂತರ ತಕ್ಷಣದಲ್ಲೇ ವಿಜೇತಗೊಂಡ ವಿದ್ಯಾರ್ಥಿಗಳ ಹೆಸರನ್ನು ಪ್ರಕಟಿಸಲಾಯಿತು.









