ಮಡಿಕೇರಿ ಜು.12 : ಮಡಿಕೇರಿ ನಗರಸಭಾ ಸದಸ್ಯ ಹಾಗೂ ಮಡಿಕೇರಿ ಕೊಡವ ಸಮಾಜದ ನಿರ್ದೇಶಕ ಕಾಳಚಂಡ ಅಪ್ಪಣ್ಣ ಅವರ ಮೇಲಿನ ಹಲ್ಲೆಯನ್ನು ಖಂಡಿಸಿ ಜು.14 ರಂದು ಮಡಿಕೇರಿ ಕೊಡವ ಸಮಾಜದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಮೂಲ ನಿವಾಸಿಗಳಾದ ಕೊಡವರು, ಕೊಡವ ಭಾಷಿಕರು, ಕೊಡವಾಭಿಮಾನಿಗಳ ಮೇಲೆ ದೌರ್ಜನ್ಯ ನಡೆಯದಂತೆ ಜಾಗೃತಿ ಮೂಡಿಸುವ ಸಲುವಾಗಿ ಶುಕ್ರವಾರ ಬೆಳಗ್ಗೆ 10.30 ಗಂಟೆಗೆ ಮಡಿಕೇರಿ ನಗರಸಭೆ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಹೇಳಿದರು.
ಇಂತಹ ಘಟನೆಗಳಿಂದ ಸಾಮಾಜದ ಸ್ವಾಸ್ಥ್ಯ ಹದಗೆಡಲಿದೆ, ಜನಾಂಗೀಯ ತಾರತಮ್ಯ ಹೆಚ್ಚಾಗಿ ಅಶಾಂತಿ ಮೂಡುವ ಸಾಧ್ಯತೆ ಇದೆ. ಒಬ್ಬ ಜನಪ್ರತಿನಿಧಿಯಾದವರಿಗೆ ಈ ಪರಿಸ್ಥಿತಿಯಾದರೆ ಜನಸಾಮಾನ್ಯರಿಗೆ ಏನು ರಕ್ಷಣೆ ಇದೆ ಎಂದು ಪ್ರಶ್ನಿಸಿದರು.
ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಮುಂದೆ ಜಿಲ್ಲೆಯ ಯಾವುದೇ ಭಾಗದಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ನಂದಿನೆರವಂಡ ಚಿಯಣ್ಣ, ಕಾರ್ಯದರ್ಶಿ ಕನ್ನಂಡ ಸಂಪತ್, ನಿರ್ದೇಶಕರಾದ ನಂದಿನೆರವಂಡ ದಿನೇಶ್ ಹಾಗೂ ಮೂವೇರ ಜಯರಾಮ್ ಉಪಸ್ಥಿತರಿದ್ದರು.









