ಮಡಿಕೇರಿ ಜು.14 : ಬಹು ರಾಷ್ಟ್ರೀಯ ಕಂಪನಿಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿದ್ಯಾಭ್ಯಾಸಕ್ಕೆ ತಕ್ಕದಾದ ಗೌರವಯುತ ಕೆಲಸವನ್ನು ಒದಗಿಸಿ ಬದುಕು ಕಟ್ಟಿಕೊಳ್ಳಲು ನೆರವಾಗಬೇಕೆಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ. ಬಿ.ರಾಘವ ಕರೆ ನೀಡಿದರು.
ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಶಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮಡಿಕೇರಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕೊಡಗು ಜಿಲ್ಲೆ, ಇದರ ಜಂಟಿ ಸಹಯೋಗದೊಂದಿಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಒಂದು ದಿನದ ಉದ್ಯೋಗ ಮೇಳ ನಡೆಯಿತು.
ಮೇಳದಲ್ಲಿ ಅಂಥೇಮ್ (Anthem) ಬಯೋ ಸೈನ್ಸ್, ಐಸಿಐಸಿಐ ಬ್ಯಾಂಕ್ ಹಾಗೂ ಕಲ್ಯಾಣಿ ಮೋಟರ್ಸ್ ಕಂಪನಿಗಳು ಭಾಗವಹಿಸಿದ್ದವು.
ಸುಮಾರು 250 ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು, 80ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಗೊಂಡಿದ್ದಾರೆ ಎಂದು ಉದ್ಯೋಗ ಶಾಖೆ ಅಧಿಕಾರಿ ಹಾಗೂ ಎಂಕಾಂ ವಿಭಾಗದ ಸಂಯೋಜಕ ಡಾ.ಪ್ರದೀಪ್ ಆರ್.ಭಂಡಾರಿ ಮಾಹಿತಿ ನೀಡಿದರು.
ಉದ್ಯೋಗ ಮೇಳದ ನಿರ್ವಹಣೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥರು ಹಾಗೂ ಕೌಶಲ್ಯಾಭಿವೃದ್ಧಿ ವಿಭಾಗದ ಅಧ್ಯಕ್ಷರಾದ ಡಾ. ಕೆ.ಶೈಲಶ್ರೀ ವಹಿಸಿದರು.
ಈ ಸಂದರ್ಭ ಮಾತನಾಡಿದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜೆ.ಜಿ.ಮಂಜುನಾಥ್, ಅಂಥೇಮ್ (Anthem) ಬಯೋ ಸೈನ್ಸ್ ನಂತಹ ವಿಶ್ವದ ಅಗ್ರಮಾನ್ಯ ಕಂಪನಿ ಈ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿರುವುದು ನಮ್ಮ ಕಾಲೇಜಿಗೆ ಹೆಮ್ಮೆಯ ವಿಚಾರವಾಗಿದೆ ಎಂದರು.
ಈ ಉದ್ಯೋಗ ಮೇಳದಲ್ಲಿ ಅಂಥೇಮ್ (Anthem) ಬಯೋ ಸೈನ್ಸ್ ಕಂಪೆನಿಯ ಸೀನಿಯರ್ ಮ್ಯಾನೇಜರ್ ಅಶೋಕ್ ಹೇರೂರು, ಐಸಿಐಸಿಐ ಬ್ಯಾಂಕಿನ ಟೀಮ್ ಲೀಡರ್ ವಿನೋದ್ ಹಾಗೂ ಕಲ್ಯಾಣಿ ಮೋಟಾರ್ಸ್ ಸರ್ವಿಸ್ ಮ್ಯಾನೇಜರ್ ಡೀನ್ ಜೋಯಪ್ಪ, ಮಾನವ ಸಂಪನ್ಮೂಲ ಅಧಿಕಾರಿ ಹೆಚ್.ಸಿ.ಸೂರ್ಯ ಉಪಸ್ಥಿತರಿದ್ದರು.