ಸುಂಟಿಕೊಪ್ಪ ಜು.14 : ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳು ದಾಂಧಲೆ ನಡೆಸಿದ್ದು ಓರ್ವ ಕಾರ್ಮಿಕ ಗಾಯಗೊಂಡು ಆಸ್ಪತ್ರಗೆ ದಾಖಲಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಸಮೀಪದ ಅತ್ರೂರು ನಲ್ಲೂರು ಗ್ರಾಮದ ಕಂಬಿಬಾಣೆಯ ವೃಂದಾವನ ತೋಟದ ಬಳಿ ಸಂಜೆ 6 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಬರುತ್ತಿದ್ದ ಬೂತನಕಾಡು ನಿವಾಸಿ ರಾಮಸ್ವಾಮಿ ಎಂಬುವವರ ಮೇಲೆ ಕಾಡಾನೆಯೊಂದು ದಿಢೀರ್ ದಾಳಿ ನಡೆಸಿ ಕಾಲಿಗೆ ಹೊಡೆದಿದೆ.ಆನೆಯ ಹೊಡೆತದಿಂದ ಬಲಗಾಲಿಗೆ ಗಂಭೀರ ಗಾಯವಾಗಿದ್ದು, ಎಡ ಕಾಲು, ಎದೆಯ ಭಾಗದಲ್ಲಿ ಗಾಯಗಳಾಗಿವೆ.
ಕಾರ್ಮಿಕ ರಾಮಸ್ವಾಮಿಯ ಬೊಬ್ಬೆಗೆ ಹೆದರಿದ ಆನೆಯು ಅಲ್ಲಿಂದ ಕಾಲ್ಕಿತ್ತಿದೆ.ವಿಷಯವರಿತ ಸ್ಥಳೀಯರು ಗಾಯಗೊಂಡಿದ್ದ ಕಾರ್ಮಿಕನನ್ನು ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.
ಹಾಗೆಯೇ ಕಂಬಿಬಾಣೆಯ ಚಿಕ್ಲಿಹೊಳೆಯ ರಸ್ತೆಗೆ ತೆರಳುವ ಕಾಫಿ ಬೆಳೆಗಾರ ಎಂ.ಕೆ.ನರೇಂದ್ರ ಅವರ ಮನೆಯ ಗೇಟನ್ನು ಕಾಡಾನೆ ತುಳಿದು ಹಾನಿಗೊಳಿಸಿ ಪರಾರಿಯಾಗಿದೆ.
ಕಂಬಿಬಾಣೆ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟು ಆತಂಕ ಸೃಷ್ಟಿ ಮಾಡುತ್ತಿವೆ.