ನಾಪೋಕ್ಲು ಜು.18 : ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ಮುಖ್ಯ ರಸ್ತೆಯ ಬದಿಯಲ್ಲಿ ಒಣಗಿದ ಮರವೊಂದು ಬೀಳುವ ಸ್ಥಿತಿಯಲ್ಲಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ನಾಪೋಕ್ಲು ಬಳಿಯ ಬಾವಲಿ ಗ್ರಾಮದಿಂದ ಎಡಪಾಲ, ಚೆಂಯ್ಯಂಡಾಣೆ ಮಾರ್ಗವಾಗಿ ವಿರಾಜಪೇಟೆಗೆ ತೆರಳುವ ಮುಖ್ಯ ರಸ್ತೆಯ ಬದಿಯಲ್ಲಿ ಕೆಲವು ವರ್ಷಗಳಿಂದ ಒಣಗಿದ ಮರವೊಂದು ಬೀಳುವ ಸ್ಥಿತಿಗೆ ತಲುಪಿದ್ದರೂ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ಬಾರದೇ ಇರುವುದು ವಿಪರ್ಯಾಸ. ಮಳೆಗಾಲ ಪ್ರಾರಂಭವಾಗಿದ್ದು, ಹೆಚ್ಚಿನ ಮಳೆ ಬೀಳುವ ಸಂದರ್ಭ ಮರ ಧರೆಗುರುಳುವ ಸಾಧ್ಯತೆಗಳು ಕಂಡು ಬರುತ್ತಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು, ವಾಹನ ಸವಾರರು ಭಯದಿಂದ ಸಂಚರಿಸುವ ಪರಿಸ್ಥಿತಿ ಉದ್ಭವವಾಗಿದೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ನಾಪೋಕ್ಲು, ಮೂರ್ನಾಡು ಭಾಗಗಳಿಂದ ಶಾಲಾ ವಾಹನಗಳು, ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿದ್ದು, ಮರ ಬಿದ್ದರೆ ಭಾರಿ ಅನಾಹುತ ಅನುಭವಿಸುವ ಸಾಧ್ಯತೆ ಎದ್ದು ಕಾಣುತ್ತಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ತಕ್ಷಣ ಮರವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ವಾಹನಸವಾರರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವರದಿ :ಝಕರಿಯ ನಾಪೋಕ್ಲು