ನಾಪೋಕ್ಲು ಜು.19 : ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾ.ಪಂಚಾಯಿತಿ ವ್ಯಾಪ್ತಿಯ ನೆಲಜಿ ಗ್ರಾಮದಲ್ಲಿ ಬೆಳೆಗಾರರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಅಪಾರ ಪ್ರಮಾಣದಲ್ಲಿ ಬೆಳೆದಿದ್ದ ಬೆಳೆಗಳನ್ನು ತುಳಿದು ನಾಶಪಡಿಸಿ ನಷ್ಟ ಉಂಟು ಮಾಡಿದೆ.
ನೆಲಜಿ ಗ್ರಾಮದ ನಿವಾಸಿ ಎಂ.ಎಂ ಶಾರದ ಎಂಬವರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ತೋಟದಲ್ಲಿ ಬೆಳೆದಿದ್ದ ಕಾಫಿ, ತೆಂಗು, ಬಾಳೆ ಸೇರಿದಂತೆ ಇನ್ನಿತರ ಫಸಲು ಭರಿತ ಗಿಡಗಳನ್ನು ತುಳಿದು ನಾಶಪಡಿಸಿ ಅಪಾರ ನಷ್ಟಉಂಟು ಮಾಡಿದೆ.
ಕಳೆದ ಕೆಲವು ದಿನಗಳ ಹಿಂದೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ, ಚೇಲಾವರ, ಮರಂದೋಡ ಹಾಗೂ ಕಕ್ಕಬ್ಬೆ, ಕುಂಜಿಲ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ತೋಟಗಳಿಗಲ್ಲಿ ದಾಂಧಲೆ ನಡೆಸಿ ಬೆಳೆಗಾರರು ಕಷ್ಟಪಟ್ಟು ಬೆಳೆದಿದ್ದ ಬೆಳೆಗಳನ್ನು ತುಳಿದು ನಾಶಪಡಿಸಿ ನಷ್ಟ ಅನುಭವಿಸುವಂತೆ ಮಾಡಿತ್ತು. ಈಗ ಕಾಡಾನೆಗಳು ನೆಲಜಿ ಗ್ರಾಮ ವ್ಯಾಪ್ತಿಯಲ್ಲಿ ಗೋಚರಿಸಿದ್ದು ಜನರು ನಡೆದಾಡಲು ಭಯಪಡುವ ಪರಿಸ್ಥಿತಿ ಉದ್ಭವವಾಗಿದೆ.
ಸಂಬಂಧಪಟ್ಟ ಅರಣ್ಯ ಇಲಾಖೆಯವರು ತಕ್ಷಣ ಕಾಡಾನೆಗಳನ್ನು ಕಾಡಿಗಟ್ಟುವ ಅಥವಾ ಹಿಡಿದು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ನಷ್ಟ ಅನುಭವಿಸಿದ ಬೆಳಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ :ಝಕರಿಯ ನಾಪೋಕ್ಲು