ನಾಪೋಕ್ಲು ಜು.19 : ಇತ್ತೀಚಿನ ದಿನಗಳಲ್ಲಿ ಕಾಡುಗಳು ಕ್ಷಿಣಿಸುತ್ತಾ ಕಾಂಕ್ರೀಟ್ ಮಯವಾಗುತ್ತಿದೆ.ಪರಿಸರ ಸಮತೋಲನವನ್ನು ಕಾಪಾಡಿ ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶೌರ್ಯ ಸದಸ್ಯರು ನಡೆಸುತ್ತಿರುವ ಹಣ್ಣಿನ ಗಿಡ ನಾಟಿ ಅಭಿಯಾನ ಶ್ಲಾಘನೀಯ ಎಂದು ಕುಂಜಲಗೇರಿ ಗ್ರಾಮದ ಶ್ರೀ ಈಶ್ವರ ಬೊಟ್ಲಪ್ಪ ದೇವಾಲಯದ ಕಾರ್ಯದರ್ಶಿ ಕುತಂಡ ಬೋಪಯ್ಯ ಹೇಳಿದರು.
ಶ್ರೀ ಈಶ್ವರ ಬೊಟ್ಲಪ್ಪ ದೇವಾಲಯದ ಆವರಣದಲ್ಲಿ ನಾಪೋಕ್ಲು ಶೌರ್ಯ ಘಟಕದ ಸದಸ್ಯರು ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಣ್ಣಿನ ಗಿಡಗಳನ್ನು ನೆಡುವುದರಿಂದ ಪರಿಸರ ರಕ್ಷಣೆಯೊಂದಿಗೆ ಪ್ರಾಣಿ ಪಕ್ಷಿಗಳಿ ಗೆ ಮುಂದಿನ ದಿನಗಳಲ್ಲಿ ಆಹಾರದ ಕೊರತೆ ನೀಗಿಸಿದಂತಾಗುತ್ತದೆ. ತಮ್ಮ ಈ ಸೇವೆಯಿಂದಾಗಿ ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ಕಡಿವಾಣ ಹಾಕಬಲ್ಲದು ಎಂದರು.
ನಾಪೋಕ್ಲು ಶೌರ್ಯ ಘಟಕದ ಸಂಯೋಜಕ ಬಾಳೆಯಡ ದಿವ್ಯ ಮಂದಪ್ಪ ಮಾತನಾಡಿ, ಕಳೆದ 3 ವರ್ಷಗಳಿಂದ ನಾನಾ ಕಡೆಗಳಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಸುತ್ತಾ ಬರುತ್ತಿದ್ದೇವೆ, ನೆಟ್ಟ ಗಿಡಗಳು ಚೆನ್ನಾಗಿ ಬೆಳೆದು ಕೆಲವೊಂದು ಗಿಡಗಳಲ್ಲಿ ಹಣ್ಣುಗಳಾಗಿರುವುದು ನಮ್ಮ ಶೌರ್ಯ ಘಟಕದ ಸಾರ್ಥಕತೆಯ ಪರಮಾವಧಿ ಎಂದರು.
ಹೊದ್ದೂರು ಗ್ರಾಮದಲ್ಲಿರುವ ವಾಟೆಕಾಡು ನರ್ಸರಿಯಿಂದ ಸುಮಾರು 100 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಶೌರ್ಯ ಘಟಕ ನಮ್ಮ ಸ್ವಂತ ಖರ್ಚಿನಿಂದ ಕುಂಜಲಗೇರಿ ಗ್ರಾಮದ ಶ್ರೀ ಈಶ್ವರ ಬೊಟ್ಲಪ್ಪ ದೇವಸ್ಥಾನಕ್ಕೆ ವಾಹನದಲ್ಲಿ ಸಾಗಿಸಿದರು. ಆನಂತರ ದೇವಾಲಯದ ಆವರಣದಲ್ಲಿ ಗಿಡ ನಾಟಿ ಕಾರ್ಯವನ್ನು ಮಾಡಿ ಸಮಾಜಕ್ಕೆ ಮಾದರಿಯಾದರು.
ಈ ಸಮಾಜ ಸೇವಾ ಕಾರ್ಯದಲ್ಲಿ ನಾಪೋಕ್ಲು ಶೌರ್ಯ ಘಟಕದ 23 ಸದಸ್ಯರು ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ನಿಸ್ವಾರ್ಥ ಸೇವೆಯೊಂದಿಗೆ ಭಾಗವಹಿಸಿ ಸಾರ್ವಜನಿಕರ ಪ್ರಸಂಸ್ಥೆಗೆ ಭಾಜನರಾದರು..
ವರದಿ : ದುಗ್ಗಳ ಸದಾನಂದ