ನಾಪೋಕ್ಲು ಜು.22 : ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಸರ್ಕಾರ ಕೊಡಗನ್ನು ಜಂಗಲ್ ರಾಜ್ಯ ಎಂದು ಘೋಷಿಸಿ ಮನುಷ್ಯರನ್ನು ಕೊಡಗಿನಿಂದ ಹೊರಹಾಕಬಹುದಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕೊಡಗು ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ, ಭಾರತೀಯ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಸಣ್ಣುವಂಡ ಎಂ.ಕಾವೇರಪ್ಪ ಹೇಳಿದರು.
ನಾಪೋಕ್ಲು ವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ -ಪ್ರಾಣಿ ಸಂಘರ್ಷ ಕೊಡಗಿನ ಅತ್ಯಂತ ಭೀಕರ ಸಮಸ್ಯೆ. ಮೊದಲು ದಕ್ಷಿಣ ಕೊಡಗಿನ ಕೆಲವು ಭಾಗ ಮತ್ತು ಸೋಮವಾರಪೇಟೆಯ ಕೆಲವು ಪ್ರದೇಶಗಳಿಗೆ ಸೀಮಿತವಾಗಿತ್ತು. ಈಗ ಇದು ಪ್ರತಿಯೊಬ್ಬರ ಸಮಸ್ಯೆಯಾಗಿದೆ. ಆನೆಗಳಿಗೆ ಕೃಷಿಕರ ತೋಟಗಳು ಮತ್ತು ಅರಣ್ಯ ಸರ್ಕಾರಿ ಆಸ್ಪತ್ರೆಗಳಾಗಿವೆ ಎಂದರು.
ಉತ್ತಮ ಆಹಾರ ಮತ್ತು ನೀರಿನ ಸೌಕರ್ಯ ಉತ್ತಮವಾಗಿರುವುದರಿಂದ ಕಾಡಾನೆಗಳು ಕೃಷಿಕರ ತೋಟಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದ ಬೆಳೆಗಾರರು ಸಂಪೂರ್ಣವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೃಷಿಕರ ತೋಟ ಈಗ ಆನೆ ಹೆರಿಗೆಗೆ ಅತ್ಯುತ್ತಮ ಆಸ್ಪತ್ರೆಗಳಾಗಿವೆ. ಖಾಸಗಿ ಎಸ್ಟೇಟ್‌ಗಳಿಂದ ಆನೆಗಳನ್ನು ಕಾಡಿಗೆ ಓಡಿಸಲು ಸರ್ಕಾರಗಳು ಸೋಲಾರ್ ಫೆನ್ಸಿಂಗ್, ರೈಲ್ವೆ ಬ್ಯಾರಿಕೇಡ್ ಮತ್ತು ಹಸ್ತಚಾಲಿತವಾಗಿ ಓಡಿಸುವ ಕ್ರಮ ಅನುಸರಿಸುತ್ತಿದೆ. ಆದರೆ ಈ ಪ್ರಯತ್ನಗಳು ಶಾಶ್ವತ ಪರಿಹಾರವಲ್ಲ ಎಂದರು.
ಸರ್ಕಾರ ಮಾನವ-ಪ್ರಾಣಿ ಸಂಘರ್ಷದ ಸಮಸ್ಯೆಯನ್ನು ಪರಿಹರಿಸಲು ಅರಣ್ಯ ಇಲಾಖೆಗೆ ಮಾರ್ಗದರ್ಶನ ಮತ್ತು ಸಲಹೆ ನೀಡಲು ಸ್ಥಳೀಯ ಜನರನ್ನು ಒಳಗೊಂಡ ಸಮಿತಿ ರಚಿಸಬೇಕು. ಬಿಕ್ಕಟ್ಟನ್ನು ನಿವಾರಿಸಲು ಇಲಾಖೆಯು ಅಲ್ಪಾವಧಿ ಮತ್ತು ದೀರ್ಘಾವಧಿ ಕಾರ್ಯಕ್ರಮ ರೂಪಿಸಬೇಕು. ಜತೆಗೆ ಅರಣ್ಯಗಳ ಬದಿಯಲ್ಲಿ ಆಹಾರ ಸಾಮಗ್ರಿ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಹಲವು ವರ್ಷಗಳಿಂದ ಮುಖ್ಯ ಆಹಾರವಾಗಿರುವ ಬಿದಿರು ಆನೆಗಳಿಗೆ ಲಭ್ಯವಾಗುತ್ತಿಲ್ಲ. ಕಾಡುಗಳಲ್ಲಿ ಬಿದಿರು ಕೃಷಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ತೇಗದ ತೋಟಗಳ ಬದಲಾಗಿ ಹಲಸನ್ನು ನೆಡಬೇಕು. ಕಾಡುಗಳೊಳಗಿನ ಹಳೆಯ ಭತ್ತದ ಗದ್ದೆಗಳನ್ನು ಕೊಳಗಳಾಗಿ ಪರಿವರ್ತಿಸಬೇಕು. ಅರಣ್ಯದೊಳಗೆ ವನಮಹೋತ್ಸವ ನಡೆಸುವ ಮೂಲಕ ಅರಣ್ಯ ಸಂಪತ್ತನ್ನು ಹೆಚ್ಚಿಸಬೇಕು. ಸರ್ಕಾರ ಹಣ ಖರ್ಚು ಮಾಡುತ್ತಿದೆಯಾದರೂ ಫಲಿತಾಂಶ ತೃಪ್ತಿಕರವಾಗಿಲ್ಲ. ಈ ಹಿಂದಿನಂತೆ ಆನೆಗಳನ್ನು ಹಿಡಿದು ವಿವಿಧ ದೇಶ ಮತ್ತು ರಾಜ್ಯಗಳಿಗೆ ಮಾರಾಟ ಮಾಡಬೇಕು. ಅದರ ಹೆಚ್ಚಳದ ಜನಸಂಖ್ಯೆಯನ್ನು ನಿಯಂತ್ರಿಸಲು ಕುಟುಂಬ ಯೋಜನೆ ವಿಧಾನ ಅನುಸರಿಸಬೇಕು ಎಂದರು.
ವರದಿ : ದುಗ್ಗಳ ಸದಾನಂದ