ಮಡಿಕೇರಿ ಜು.23 : ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಮತ್ತು ಇಬ್ಬರು ಮಹಿಳೆಯರನ್ನು ಅವಮಾನಿಸಿದ ಘಟನೆ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿರುವ ಮಡಿಕೇರಿ ನಗರಸಭಾ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಅಮಾನವೀಯವಾಗಿ ನಡೆದುಕೊಂಡವರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ನೊಂದವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ದೇಶವನ್ನು ರಕ್ಷಿಸಿದ ಯೋಧನ ಪತ್ನಿಗೇ ರಕ್ಷಣೆ ನೀಡಲಾಗದಷ್ಟು ಹೀನಾಯ ಸ್ಥಿತಿಯಲ್ಲಿರುವ ಮಣಿಪುರ ಸರ್ಕಾರವನ್ನು ವಜಾಗೊಳಿಸಬೇಕು. ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಮತ್ತಷ್ಟು ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯಬೇಕು. ದೇಶವ್ಯಾಪಿ ದ್ವೇಷದ ಕಿಚ್ಚು ಹಬ್ಬುವ ಮುನ್ನ ಪ್ರಧಾನಮಂತ್ರಿಗಳು ಎಚ್ಚೆತ್ತುಕೊಳ್ಳಬೇಕು. “ಬೇಟಿ ಪಡಾವೋ ಬೇಟಿ ಬಚಾವೋ” ಘೋಷಣೆ ಕೇವಲ ಪ್ರಚಾರಕಷ್ಟೇ ಸೀಮಿತವಾಗಬಾರದು. ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ವಾಸ್ತವತೆಯನ್ನು ಅರಿತು ಅಮಾಯಕರ ರಕ್ಷಣೆಗೆ ಬರಬೇಕು ಎಂದು ಲೀಲಾ ಶೇಷಮ್ಮ ಒತ್ತಾಯಿಸಿದ್ದಾರೆ.








