ಕುಶಾಲನಗರ, ಜು.26: ವಿದ್ಯಾರ್ಥಿ ಸಮುದಾಯದಲ್ಲಿ ಉತ್ತಮ ವ್ಯಕ್ತಿತ್ವ ಹಾಗೂ ಉತ್ತಮ ನಾಗರಿಕನನ್ನಾಗಿ ರೂಪಿಸಲು ಸಹಕಾರಿಯಾಗಿರುವ ರಾಷ್ಟ್ರೀಯ ಸೇವಾ ಯೋಜನೆ( ಎನ್.ಎಸ್.ಎಸ್.)ಯ ಚಟುವಟಿಕೆಗಳು
ವಿದ್ಯಾರ್ಥಿಗಳಿಗೆ ಭವಿಷ್ಯದ ಕುರಿತು ಸಾಮಾಜಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕಲಿಸುವುದರೊಂದಿಗೆ ಅವರಲ್ಲಿ ಸೇವಾ ಮನೋಭಾವನೆ ಬೆಳೆಸಲು ಸೂಕ್ತ ವೇದಿಕೆ ಒದಗಿಸುತ್ತದೆ ಎಂದು
ರಾಜ್ಯ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪ್ರತಾಪ್ ಲಿಂಗಯ್ಯ ಹೇಳಿದರು.
ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮೈಸೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಯೋಜನೆ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಹಾಗೂ ಎನ್‌ಎಸ್‌ಎಸ್ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಸರ್ಕಾರಿ ಪ್ರೌಢಶಾಲೆಗಳ ಎನ್‌ಎಸ್‌ಎಸ್ ಘಟಕಗಳ ಮುಖ್ಯ ಶಿಕ್ಷಕರು ಹಾಗೂ ಕಾರ್ಯಕ್ರಮ
ಅಧಿಕಾರಿಗಳಿಗೆ ಏರ್ಪಡಿಸಿದ್ದ ಎನ್‌ಎಸ್‌ಎಸ್ ಕಾರ್ಯಾಗಾರವನ್ನು
ಉದ್ಘಾಟಿಸಿ ಎನ್‌ಎಸ್‌ಎಸ್.ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಎನ್.ಎಸ್.ಎಸ್. ಶಾಲಾ – ಕಾಲೇಜು ವಿದ್ಯಾರ್ಥಿಗಳಲ್ಲಿ ಶಿಸ್ತು- ಸಂಯಮ, ಸೇವಾ ಮನೋಭಾವನೆ,
ರಾಷ್ಟ್ರೀಯ ಭಾವೈಕ್ಯತೆ, ಸೇವಾ ಮನೋಭಾವ ಬೆಳೆಸುವುದರೊಂದಿಗೆ ಅವರಲ್ಲಿ ಉತ್ತಮ ನಾಯಕತ್ವ ಹಾಗೂ
ವ್ಯಕ್ತಿತ್ವವನ್ನು ಬೆಳೆಸಲು ಉತ್ತಮ ಅವಕಾಶ ಕಲ್ಪಿಸುತ್ತದೆ ಎಂದರು.
ಎನ್‌ಎಸ್‌ಎಸ್ ಮೂಲಕ ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಶಕ್ತರಾಗುತ್ತಾರೆ ಎಂದರು.
ರಾಷ್ಟ್ರದ ಬೆಳವಣಿಗೆಯಲ್ಲಿ ಎನ್‌ಎಸ್‌ಎಸ್ ಪಾತ್ರ ಮಹತ್ವದ್ದಾಗಿದೆ. ಈ ಕಾರ್ಯದಲ್ಲಿ ದೇಶದಲ್ಲಿ 45 ಲಕ್ಷ ಸ್ವಯಂ ಸೇವಕರನ್ನು ಹೊಂದಿರುವ ಎನ್ನೆಸ್ಸೆಸ್ ನಲ್ಲಿ ನಮ್ಮ ರಾಜ್ಯದಲ್ಲೇ ಅಧಿಕವಾಗಿ 6.4 ಲಕ್ಷ ಮಂದಿ ಎನ್‌ಎಸ್‌ಎಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆ ತಂದಿದೆ. ಹಾಗೆಯೇ, ರಾಜ್ಯದಲ್ಲಿ 680 ಪ್ರೌಢಶಾಲೆಗಳಲ್ಲಿ
ಎನ್‌ಎಸ್‌ಎಸ್ ಘಟಕವನ್ನು ಅನುಷ್ಠಾನಗೊಳಿಸಿದ್ದು, 66 ಸಾವಿರ ಮಂದಿ ಸ್ವಯಂ ಸೇವಕರಾಗಿ ಎನ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಿಗೆ ರಾಜ್ಯಮಟ್ಟದ ಮಾನಸಿಕ ಆರೋಗ್ಯ ಕುರಿತ ತರಬೇತಿ ನೀಡುವುದು ಸೇರಿದಂತೆ ಜಿಲ್ಲೆಯಲ್ಲಿ ಎನ್‌ಎಸ್‌ಎಸ್ ಘಟಕಗಳನ್ನು ಹೊಂದಿರುವ ಶಾಲೆಗಳ
ಎನ್‌ಎಸ್‌ಎಸ್ ಅಧಿಕಾರಿಗಳು ಹಾಗೂ ಸ್ವಯಂ ಸೇವಕರಿಗೆ ಎರಡು ದಿನಗಳ ಕಾಲ ಜಿಲ್ಲಾಮಟ್ಟದ ಎನ್‌ಎಸ್‌ಎಸ್
ತರಬೇತಿ ಕಾರ್ಯಾಗಾರ ನಡೆಸಲಾಗುವುದು ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ,
ಶ್ರಮದಾನದ ಮೂಲಕ ಸ್ವಚ್ಛತೆ, ಶ್ರಮದಾನ ಪ್ರಗತಿಪರ ಚಿಂತನೆ, ಪ್ರಾಕೃತಿಕ ವಿಕೋಪ ಮತ್ತು ಪ್ರಕೃತಿ ಸಂರಕ್ಷಣೆ
ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಪ್ರತಾಪ್ ಲಿಂಗಯ್ಯ ತಿಳಿಸಿದರು.
ಎನ್‌ಎಸ್‌ಎಸ್ ಘಟಕಗಳ ಮೂಲಕ ಶಾಲೆಗಳಲ್ಲಿ ಸಂಘಟಿಸಬೇಕಾದ ವಿವಿಧ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಮೈಸೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ ಎಂ.ಬಿ.ಸುರೇಶ್ ಮಾತನಾಡಿ, ಎನ್‌ಎಸ್‌ಎಸ್ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆಯೊಂದಿಗೆ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಿದೆ ಎಂದರು.
ಎನ್‌ಎಸ್‌ಎಸ್ ಎಂದರೆ ‘ನಾನು ಸೇವೆಗಾಗಿ ಸದಾ ಸಿದ್ಧ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಮಾತನಾಡಿ, ಎನ್‌ಎಸ್‌ಎಸ್ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸಮಗ್ರ ವ್ಯಕ್ತಿತ್ವ ಬೆಳವಣಿಗೆ ಜತೆಗೆ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನಾಗಿ ರೂಪಿಸಲು ಸೂಕ್ತ ವೇದಿಕೆ ಕಲ್ಪಿಸುತ್ತದೆ ಎಂದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್. ಪಲ್ಲೇದ, ಕೊಡಗು ಜಿಲ್ಲೆಯಲ್ಲಿ ಎನ್‌ಎಸ್‌ಎಸ್ ಘಟಕಗಳ
ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳ ವರದಿ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಮಾತನಾಡಿ, ಪ್ರೌಢಶಾಲೆಗಳಲ್ಲಿ
ಎನ್ನೆಸ್ಸೆಸ್ ಚಟುವಟಿಕೆಗಳು ಮಕ್ಕಳನ್ನು ಸೇವಾ ಚಟುವಟಿಕೆಗಳ ತೊಡಗಿಸಿಕೊಳ್ಳಲು ಸಹಕಾರಿಯಾಗಿವೆ ಎಂದರು.
ಕಾಲೇಜಿನ ಉಪ ಪ್ರಾಂಶುಪಾಲ ವೈ.ಎಸ್. ಪರಮೇಶ್ವರಪ್ಪ ಮಾತನಾಡಿದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ‘ಎನ್.ಎಸ್.ಎಸ್. ಮತ್ತು ಪರಿಸರ ‘ ಕುರಿತು ಹಾಗೂ ಕುಶಾಲನಗರ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಉ.ರಾ.ನಾಗೇಶ್
‘ ಕಲಾತ್ಮಕವಾಗಿ ಎನ್.ಎಸ್.ಎಸ್.ಕಾರ್ಯಕ್ರಮಗಳ ನಿರ್ವಹಣೆ’ ಎಂಬ ವಿಷಯದ ಕುರಿತು ಮಾಹಿತಿ ನೀಡಿದರು.
ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಿ.ಪಿ.ಗಾಯಿತ್ರಿ, ಸುಕುಮಾರಿ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಕೋಶಾಧಿಕಾರಿ ಎ.ಸಿ.ಮಂಜುನಾಥ್, ಚಿತ್ರಕಲಾ ಶಿಕ್ಷಕ ಉ.ರಾ.ನಾಗೇಶ್, ಶಿಕ್ಷಕಿಯರಾದ ಬಿ.ಬಿ.ಹೇಮಲತ, ಎಂ.ಪಿ.ರಶ್ಮಿ ಇದ್ದರು.
ವಿದ್ಯಾರ್ಥಿಗಳು ಎನ್‌ಎಸ್‌ಎಸ್ ಗೀತೆ ಹಾಡಿದರು. ಕಾರ್ಯಾಗಾರದಲ್ಲಿ ಎನ್‌ಎಸ್‌ಎಸ್ ಘಟಕ ಹೊಂದಿರುವ
ವಿವಿಧ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಕಾರ್ಯಕ್ರಮ ಅಧಿಕಾರಿಗಳು ಪಾಲ್ಗೊಂಡಿದ್ದರು.