ಮಡಿಕೇರಿ ಜು.26 : ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡಲು ಮಾಧ್ಯಮಗಳು ಅತ್ಯವಶ್ಯಕ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.
ಕೊಡಗು ಪತ್ರಕರ್ತರ ಸಂಘದ ವೀರಾಜಪೇಟೆ ತಾಲೂಕು ಘಟಕ ಹಾಗೂ ಅರಮೇರಿ ಕಳಂಚೇರಿ ಮಠದ ಸಂಯುಕ್ತಾಶ್ರಯದಲ್ಲಿ ಅರಮೇರಿ ಮಠದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ದಾರಿ ತಪ್ಪಿದಾಗ ಎಚ್ಚರಿಸಬೇಕಾದುದು ಮಾದ್ಯಮಗಳ ಜವಾಬ್ದಾರಿಯಾಗಿದೆ. ಸಂವಿಧಾನದಲ್ಲಿ ಪತ್ರಿಕಾ ರಂಗವನ್ನು ನಾಲ್ಕನೇಯ ಅಂಗವಾಗಿ ಗುರುತಿಸಲಾಗಿದ್ದು, ಪತ್ರಿಕಾ ರಂಗದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಪೊನ್ನಣ್ಣ ನುಡಿದರು.
ಪತ್ರಿಕೆಗಳನ್ನು ನಡೆಸುವವರು ಇಂದಿನ ಕಾಲಘಟ್ಟದಲ್ಲಿ ಸಂಕಷ್ಟದಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳ ಭರಾಟೆಯಿಂದ ಪತ್ರಿಕೆಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ.ಬಹಳಷ್ಟು ನಕಲಿ ಪತ್ರಕರ್ತರು ಹುಟ್ಟಿಕೊಳ್ಳುತಿದ್ದು, ಪತ್ರಕರ್ತರ ಸಂಘಗಳು ಅಂಥವರಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು. ಉತ್ತಮವಾದ ಪತ್ರಿಕೆಗಳು ಮತ್ತು ಉತ್ತಮ ಪತ್ರಕರ್ತರನ್ನು ಉಳಿಸುವ ಕೆಲಸವಾಗಬೇಕು. ಪತ್ರಕರ್ತರ ಸಂಘಗಳು ಸದೃಢವಾಗಬೇಕು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಶಕ್ತಿ ದಿನ ಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ. ಅನಂತಶಯನ ಮಾತನಾಡಿ, ಮಾಧ್ಯಮಗಳು ಸಮಾಜದಲ್ಲಿ ಕೃಷಿ, ಸಾಹಿತ್ಯ, ಆರೋಗ್ಯ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರದ ವಿಚಾರಗಳನ್ನು ಜಗತ್ತಿಗೆ ತಿಳಿಯಪಡಿಸುತ್ತವೆ. ಆದರೆ ಸದಾ ಸಮಾಜದ ಒಳಿತಿಗಾಗಿ, ಉತ್ತಮ ಸಮಾಜದ ನಿರ್ಮಾಣಕ್ಕಾಗಿ ದುಡಿಯುವ ಪತ್ರಕರ್ತರಿಗೆ ಯಾವುದೇ ಭದ್ರತೆ ಇಲ್ಲವಾಗಿದೆ ಎಂದು ವಿಷಾದಿಸಿದರು. ಒಮ್ಮೊಮ್ಮೆ ಸಮಾಜದ ಹಿತಕ್ಕಾಗಿ ಮಾಡುವ ವರದಿಗಳಿಂದ ಏನೂ ತಪ್ಪು ಮಾಡದ ಪತ್ರಕರ್ತ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪತ್ರಕರ್ತರಿಗೆ ಸೂಕ್ತ ಭದ್ರತೆ ಒದಗಿಸುವತ್ತ ಸಂಬಂಧಿಸಿದವರು ಕಾರ್ಯೋನ್ಮುಖರಾಗಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಅರಮೇರಿ ಕಳಂಚೇರಿ ಮಠದ ಮಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮಾಧ್ಯಮಗಳು ಸಮಾಜದ ಆಧಾರಸ್ತಂಭಗಳಾಗಿವೆ. ಪತ್ರಕರ್ತರು ಸದ್ದಿಲ್ಲದೇ ತಮ್ಮ ಸುದ್ದಿಗಳ ಮೂಲಕ ಪ್ರತಿನಿತ್ಯ ಸಮಾಜವನ್ನು ಎಚ್ಚರಿಸುತ್ತಾರೆ. ಪತ್ರಕರ್ತರಾದವರಿಗೆ ಭಾಷಾ ಜ್ಞಾನ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದ ಪತ್ರಕರ್ತರಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯಗಳು ಸಿಗುವಂತಾಗಬೇಕೆಂದರು. ವೇದಿಕೆಯಲ್ಲಿ ಹಿರಿಯ ಸಾಹಿತಿ ಚಿಪ್ಪಿ ಕಾರ್ಯಪ್ಪ ಉಪಸ್ಥಿತರಿದ್ದರು.
ಪತ್ರಿಕಾ ದಿನಾಚರಣೆಯ ಅಂಗವಾಗಿ ಹಿರಿಯ ಪತ್ರಕರ್ತರಾದ ಮುಲ್ಲೇಂಗಡ ಶಂಕರಿ ಪೊನ್ನಪ್ಪ,ಚೋಕಿರ ಪವಿತ್ರ ಪೂವಯ್ಯ, ಶ್ರೀಧರ್ ಹೂವಲ್ಲಿ, ಶ್ರೀಧರ್ ನೆಲ್ಲಿತ್ತಾಯ, ಸಯ್ಯದ್ ಇರ್ಫಾನ್, ಅಂಚೆಮನೆ ಸುಧಿ ಕುಮಾರ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಕೊಡಗು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಎಸ್.ಎಂ.ಎಸ್.ವಿದ್ಯಾಪೀಠದ ವಿದ್ಯಾರ್ಥಿನಿಯರು ಪ್ರಾರ್ಥಿಸಿ ,ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಧೋಷ್ ಪೂವಯ್ಯ ನಿರೂಪಿಸಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿದರು, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉಷಾ ಪ್ರೀತಮ್ ವಂದಿಸಿದರು.