ಮಡಿಕೇರಿ ಜು.27 : ‘ಹಾಕಿ’ ಪ್ರತಿಭೆಗಳಿಗೆ ಉತ್ತೇಜನವನ್ನು ನೀಡುವ ನಿಟ್ಟಿನಲ್ಲಿ ನಾಪೋಕ್ಲುವಿನಲ್ಲಿ ಆಯೋಜಿತವಾಗಿದ್ದ ‘ಅಪ್ಪಚೆಟ್ಟೋಳಂಡ ಕಪ್ ಹಾಕಿ ಉತ್ಸವ’ಕ್ಕೆ ಸರ್ಕಾರದಿಂದ 1 ಕೋಟಿ ಅನುದಾನ ಬಿಡುಗಡೆಯಾಗಿರುವುದಾಗಿ ಉತ್ಸವ ಸಮಿತಿಯ ಸಂಚಾಲಕರಾದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲಾ ಯುವ ಸಬಲೀಕರಣ ಇಲಾಖೆಯಿಂದ ಕೋಟಿ ಅನುದಾನದ ಚೆಕ್ ಇದೇ ಜು.18 ರಂದು ಉತ್ಸವ ಸಮಿತಿಗೆ ದೊರಕಿದೆ. ಮುಂಬರುವ ವರ್ಷಗಳಲ್ಲಿ ನಡೆಯುವ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕು ಇದೇ ರೀತಿ ರಾಜ್ಯದ ನೂತನ ಸರ್ಕಾರ ಅನುದಾನವನ್ನು ಒದಗಿಸಬೇಕೆಂದು ಮನವಿ ಮಾಡಿದರು.
ನಾಪೋಕ್ಲುವಿನಲ್ಲಿ ಪ್ರಸಕ್ತ ಸಾಲಿನ ಮಾ.18ರಿಂದ ಒಂದು ತಿಂಗಳ ಕಾಲ ಆಯೋಜಿತ ಹಾಕಿ ಉತ್ಸವಕ್ಕೆ ಒಂದು ಕೋಟಿ ಅನುದಾನವನ್ನು ದೊರಕಿಸಿಕೊಡುವಲ್ಲಿ ಹಿಂದಿನ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಸಾಕಷ್ಟು ಶ್ರಮಿಸಿದ್ದಾರೆ ಮತ್ತು ಇವರ ಪ್ರಯತ್ನಗಳಿಗೆ ಅಂದಿನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂರಕ ಸ್ಪಂದನವನ್ನು ನೀಡಿದ್ದರು.
ಇದರ ಫಲಶ್ರುತಿಯಾಗಿ ಇದೀಗ ಅಪ್ಪಚೆಟ್ಟೋಳಂಡ ಹಾಕಿ ಉತ್ಸವ ಸಮಿತಿಗೆ ಅನುದಾನ ದೊರಕುವಂತಾಯಿತು. ಈ ಹಿನ್ನೆಲೆ ಇಂದು ಸಮಿತಿ ಪದಾಧಿಕಾರಿಗಳು ಕೆ.ಜಿ.ಬೋಪಯ್ಯ ಅವರನ್ನು ಅವರ ಮನೆಯಲ್ಲೆ ಸನ್ಮಾನಿಸಿ, ಕೃತಜ್ಞತೆಯನ್ನು ಸಲ್ಲಿಸಿದೆಯೆಂದು ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು.
ಅಪ್ಪಚೆಟ್ಟೋಳಂಡ ಕುಟುಂಬಸ್ಥರಿಗೆ ನಾಪೋಕ್ಲುವಿನಲ್ಲಿ ಹಾಕಿ ಉತ್ಸವ ಆಯೋಜನೆಗೆ ಅವಕಾಶ ದೊರೆತ ಹಂತದಲ್ಲಿ ಸರ್ಕಾರದ ಅನುದಾನಕ್ಕಾಗಿ ಪ್ರಯತ್ನಿಸಲಾಗಿತ್ತು. ಆ ಸಂದರ್ಭ ಅಂದಿನ ಶಾಸಕ ಕೆ.ಜಿ. ಬೋಪಯ್ಯ ಅವರೆ ಖುದ್ದಾಗಿ ಸಮಿತಿ ಸದಸ್ಯರನ್ನು ಮುಖ್ಯ ಮಂತ್ರಿಗಳ ಬಳಿಗೆ ಕರೆದೊಯ್ದಿದ್ದರು. ಆಗ ಸಿಎಂ ಬೊಮ್ಮಾಯಿ ಅವರು ಒಂದು ಕೋಟಿ ಅನುದಾನವನ್ನು ಒದಗಿಸುವ ಭರವಸೆ ನೀಡಿದ್ದರು. ಪಂದ್ಯಾವಳಿ ಉದ್ಘಾಟನೆಯ ಸಂದರ್ಭ ಒಟ್ಟು ಅನುದಾನದ ಅರ್ಧದಷ್ಟನ್ನು ಒದಗಿಸಲು ಬೊಮ್ಮಾಯಿ ಅವರು ಪ್ರಯತ್ನಿಸಿದ್ದರು, ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲವೆಂದು ಮಾಹಿತಿ ನೀಡಿದರು.
ನಂತರದ ದಿನಗಳಲ್ಲಿ ಕೆ.ಜಿ.ಬೋಪಯ್ಯ ಅವರು ಸರ್ಕಾರದೊಂದಿಗೆ ವ್ಯವಹರಿಸಿ, ಸರ್ಕಾರದ ಅನುದಾನವನ್ನು ಯುವ ಸಬಲೀಕರಣ ಇಲಾಖೆಯ ಮೂಲಕ ಹಾಕಿ ಉತ್ಸವ ಸಮಿತಿಗೆ ಬರುವ ವ್ಯವಸ್ಥೆ ಮಾಡಿದ್ದರು. ಹಾಕಿ ಉತ್ಸವದ ಬಳಿಕ ಸಮಿತಿ 1.40 ಕೋಟಿ ರೂ. ವೆಚ್ಚವಾದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಅನುದಾನ ಸಮಿತಿಗೆ ದೊರಕಿದೆಯೆಂದು ಸಂತಸ ವ್ಯಕ್ತಪಡಿಸಿದರು.
ಸರ್ಕಾರದಿಂದ ಅನುದಾನ ಬರುತ್ತದೆ ಎನ್ನುವ ಹಿನ್ನೆಲೆಯಲ್ಲಿ ಹಾಕಿ ಉತ್ಸವ ಆಯೋಜನೆಗೆ ಪ್ರಾಯೋಜಕತ್ವ ಕಡಿಮೆ ಮಟ್ಟದಲ್ಲಿ ದೊರಕಿತು. ಆ ಹಂತದಲ್ಲಿ ಉತ್ಸವ ಸಮಿತಿಯ ಅಪ್ಪಚೆಟ್ಟೋಳಂಡ ಪೂ ದೇವಯ್ಯ ಅವರು 30 ಲಕ್ಷ ರೂ.ಗಳನ್ನು ಸಾಲದ ರೂಪದಲ್ಲಿ ಸಮಿತಿಗೆ ನೀಡಿ ಸಹಕರಿಸಿದ್ದನ್ನು ಸ್ಮರಿಸಿದರು.
ವೃದ್ಧಾಶ್ರ್ರಮ-ಅನಾಥಾಶ್ರಮಕ್ಕೆ ನೆರವು- ಅಪ್ಪಚೆಟ್ಟೋಳಂಡ ಹಾಕಿ ಉತ್ಸವಕ್ಕೆ ಪ್ರಾಯೋಜಕತ್ವದಿಂದ 30 ಲಕ್ಷ ರೂ. ಹಣ ಸಂಗ್ರಹವಾಗಿದೆ. ಇದರಲ್ಲಿ ಜಿಎಸ್‍ಟಿ ಕಳೆದು ಉಳಿಯುವ ಮೊತ್ತದಲ್ಲಿ ಶೇ.2 ರಷ್ಟನ್ನು ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ನೀಡಲು ಸಮಿತಿ ಉದ್ದೇಶಿಸಿದೆಯೆಂದು ತಿಳಿಸಿದರು.
ಗಿನ್ನಿಸ್ ದಾಖಲೆಗೆ ಪ್ರಯತ್ನ- ನಾಪೋಕ್ಲುವಿನ ಮೂರು ಮೈದಾನಗಳಲ್ಲಿ ತಿಂಗಳ ಕಾಲ ನಡೆದ ಪಂದ್ಯಾವಳಿಯಲ್ಲಿ 336 ತಂಡಗಳು ಪಾಲ್ಗೊಂಡಿದ್ದವು. ಅತ್ಯಂತ ಯಶಸ್ವಿಯಾಗಿ ನಡೆದ ಪಂದ್ಯಾವಳಿಯನ್ನು ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಳಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆಯೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪ್ಪಚೆಟ್ಟೋಳಂಡ ಹಾಕಿ ಉತ್ಸವ ಸಮಿತಿಯ ಉಪಾಧ್ಯಕ್ಷ ಅಪ್ಪಚೆಟ್ಟೋಳಂಡ ಭೀಮಯ್ಯ, ಖಜಾಂಚಿ ಅಪ್ಪಚೆಟ್ಟೋಳಂಡ ವಸಂತ್ ಮುತ್ತಪ್ಪ, ಕುಟುಂಬದ ಹಿರಿಯರಾದ ಅಪ್ಪಚೆಟ್ಟೋಳಂಡ ಪೂ ದೇವಯ್ಯ, ಅಪ್ಪಚೆಟ್ಟೋಳಂಡ ಡಾಲಿ ಬೋಪಯ್ಯ, ಅಪ್ಪಚೆಟ್ಟೋಳಂಡ ಶ್ಯಾಂ ಕಾಳಯ್ಯ ಹಾಗೂ ಅಪ್ಪಚೆಟ್ಟೋಳಂಡ ರವಿ ಮೊಣ್ಣಪ್ಪ ಉಪಸ್ಥಿತರಿದ್ದರು.









