ಮಡಿಕೇರಿ ಜು.28 : ಜನ ಸಾಮಾನ್ಯರ ಮೂಲಭೂತ ಸಮಸ್ಯೆಗಳಿಗೆ ಸಂವಿಧಾನಾತ್ಮಕವಾಗಿ ಮತ್ತು ಕಾನೂನಿಗೆ ಅನುಗುಣವಾಗಿ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುವುದಕ್ಕೆ ನಾವೆಂದಿಗೂ ಹೋಗುವುದಿಲ್ಲ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ಕೊಡಗು ಗೌಡ ಸಮಾಜಗಳ ಒಕ್ಕೂಟ, ಮಡಿಕೇರಿ ಕೊಡಗು ಗೌಡ ಸಮಾಜ ಸೇರಿದಂತೆ ಜಿಲ್ಲೆಯ ಎಲ್ಲಾ ಗೌಡ ಸಮಾಜ ಮತ್ತು ಗೌಡ ಸಂಘಟನೆಗಳ ವತಿಯಿಂದ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಇಬ್ಬರು ಶಾಸಕರುಗಳಾದ ಎ.ಎಸ್. ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪೊನ್ನಣ್ಣ ಸಮಸ್ಯೆಗಳನ್ನು ಚರ್ಚೆಯಿಂದ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ಮುಂದಿನ ಐದು ವರ್ಷಗಳ ಆಡಳಿತದ ಅವಧಿಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ನಾವಿಬ್ಬರು ಶಾಸಕರು, ಜಾತಿ ಮತ ಭೇದಗಳನ್ನು ಮರೆತು, ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಸಾಮರಸ್ಯದ ಸುಭದ್ರ ನಾಡನ್ನು ಕಟ್ಟುವ ಪ್ರಯತ್ನ ಮಾಡಬೇಕಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯ ಎಲ್ಲಾ ವರ್ಗದ ಮಂದಿ ಮಾರ್ಗದರ್ಶಕರಾಗಿರಲಿ ಎಂದು ಹಾರೈಸಿದರು.
ಚುನಾವಣೆಯವರೆಗೆ ಮಾತ್ರ ರಾಜಕೀಯ, ಚುನಾವಣೆಯ ಬಳಿಕ ಯಾವುದೇ ರಾಜಕೀಯಕ್ಕೆ ಆಸ್ಪದವಿಲ್ಲ. ಎಲ್ಲಾ ವರ್ಗದ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುವ ಚಿಂತನೆ ತನ್ನದು. ಅದೇ ರೀತಿ ಚುನಾವಣೆಯ ಸಂದರ್ಭ ಯಾವುದೇ ಪಕ್ಷಕ್ಕೆ ಮತ ನೀಡಿರಲಿ, ಆದರೆ, ಕ್ಷೇತ್ರವನ್ನು ಪ್ರತಿನಿಧಿಸಿ ಶಾಸಕರನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ತಾನು ಸಂವಿಧಾನ ಮತ್ತು ಕಾನೂನಾತ್ಮಕವಾಗಿ ಚಿಂತಿಸುವ ಮತ್ತು ಕಾರ್ಯನಿರ್ವಹಿಸುವ ಆಸಕ್ತಿ ಹೊಂದಿರುವಂತಹವನು. ಈ ಹಿನ್ನೆಲೆ ಜನರ ಯಾವುದೇ ಬೇಡಿಕೆ, ಸಮಸ್ಯೆಗಳಿಗೆ ಸಂವಿಧಾನ ಮತ್ತು ಕಾನೂನಿಗೆ ಅನುಗುಣವಾಗಿ ಭೇದ ಭಾವಗಳಿಗೆ ಅವಕಾಶವಿಲ್ಲದೆ ಪರಿಹಾರವನ್ನು ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಯಾವುದೇ ಸಂಘ ಸಂಸ್ಥೆಗಳು ಆ ಸಮುದಾಯದ ಬಡವರು, ಆರ್ಥಿಕವಾಗಿ ಹಿಂದುಳಿದವರು, ಸಂಕಷ್ಟದಲ್ಲಿರುವವರಿಗೆ ನೆರವಾಗಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವ ಪ್ರಯತ್ನಗಳನ್ನು ಮಾಡಬೇಕೆಂದು ಆಶಿಸಿದರು.
ಜಿಲ್ಲೆಯನ್ನು ಪ್ರತಿನಿಧಿಸುವ ನಾವಿಬ್ಬರು ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತ ಸದಾ ಅವರೊಂದಿಗೆ ಇರುತ್ತೇವೆ ಎಂದರು.
::: ಒಕ್ಕೂಟದಿಂದ ಅಭಿನಂದನೆ :::
ಜಿಲ್ಲೆಯ ನೂತನ ಶಾಸಕರಾದ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ, ಡಾ. ಮಂತರ್ ಗೌಡ ಅವರನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟ, ಕೊಡಗು ಗೌಡ ಸಮಾಜದ ವತಿಯಿಂದ ಸನ್ಮಾನಿಸುವುದರ ಮೂಲಕ ಅಭಿನಂದಿಸಲಾಯಿತು. ಇದೇ ಸಂದರ್ಭ ಜಿಲ್ಲೆಯ ವಿವಿಧ ಗೌಡ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶಾಸಕರುಗಳನ್ನು ಸನ್ಮಾನಿಸಿ ಗೌರವಿಸಿದರು.
::: ಬೇಡಿಕೆಗಳ ಮನವಿ :::
ಕೊಡಗು ಗೌಡ ಸಮಾಜಗಳ ಒಕ್ಕೂಟದಿಂದ ಇದೇ ಸಂದರ್ಭ ಬೇಡಿಕೆಗಳ ಮನವಿ ಪತ್ರವನ್ನು ಶಾಸಕರುಗಳಿಗೆ ಸಲ್ಲಿಸಲಾಯಿತು. ಒಕ್ಕೂಟದ ಆನಂದ ಕರಂದ್ಲಾಜೆ ಬೇಡಿಕೆಗಳ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿ, ಜಿಲ್ಲೆಯ ಜಮ್ಮಾ ಕೋವಿಯ ವಿನಾಯಿತಿ ಹಕ್ಕು ಇಲ್ಲಿನ ಎಲ್ಲಾ ಮೂಲ ನಿವಾಸಿಗಳಿಗೆ ಒದಗಿಸಬೇಕು, ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರದ ವ್ಯವಸ್ಥೆಗಳ ಕುರಿತು ಸಾರ್ವಜನಿಕವಾಗಿ ಬರುತ್ತಿರುವ ವ್ಯತಿರಿಕ್ತ ಹೇಳಿಕೆಗಳನ್ನು ಪರಿಶೀಲಿಸುವ ಮೂಲಕ, ಕ್ಷೇತ್ರದ ತಕ್ಕ ಮುಖ್ಯಸ್ಥರು ಹಾಗೂ ಪೂಜಾ ಕಾರ್ಯಗಳ ವ್ಯವಸ್ಥೆ ಯಥಾ ಸ್ಥಿತಿಯಲ್ಲಿ ಮುಂದುವರಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಭಾಗಮಂಡಲ ವ್ಯಾಪ್ತಿಯ ಸ್ಥಳೀಯರಿಗೆ ಒದಗಿಸಬೇಕು ಮತ್ತು ಒಕ್ಕೂಟದ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಅನುದಾನವನ್ನು ನೀಡಬೇಕೆಂದು ಮನವಿ ಮಾಡಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಉಪಸ್ಥಿತರಿದ್ದರು. ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ ಸ್ವಾಗತಿಸಿ, ಕೋಳಿಬೈಲು ಹರಿಣಿ ಪ್ರಾರ್ಥಿಸಿದರು. ದಂಬೆಕೋಡಿ ಸುಭಾಷಿಣಿ ಹಾಗೂ ಕೊಲ್ಯದ ಗಿರೀಶ್ ಶಾಸಕರ ಪರಿಚಯ ಮಾಡಿಕೊಟ್ಟರು. ಮೂಡಗದ್ದೆ ವಿನೋದ್ ಕಾರ್ಯಕ್ರಮ ನಿರೂಪಿಸಿ, ಕೊಡಗು ಗೌಡ ಸಮಾಜದ ನಿರ್ದೇಶಕ ಅಮೆ ಸೀತಾರಾಮ ವಂದಿಸಿದರು.
Breaking News
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*