ಮಡಿಕೇರಿ ಆ.11 : ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಗರದ ಮುಖ್ಯ ಬೀದಿಯಲ್ಲಿ ಹಿಂದೂಪರ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.
ಸಾವಿರಾರು ಕಾರ್ಯಕರ್ತರು ಪಂಜು ಹಿಡಿದು ಮಹದೇವಪೇಟೆಯ ಚೌಡೇಶ್ವರಿ ದೇವಾಲಯದಿಂದ ಸಾಗಿ ಇಂದಿರಾ ಗಾಂಧಿ ವೃತ್ತ, ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಜನರಲ್ ತಿಮ್ಮಯ್ಯ ವೃತ್ತಕ್ಕೆ ಬಂದು ಅಲ್ಲಿಂದ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪಕ್ಕೆ ಬಂದು ಜಮಾಯಿಸಿದರು.
ಜಾಥಾದಲ್ಲಿ ಕಾರ್ಯಕರ್ತರು ಕೇಸರಿ ಧ್ವಜ, ಪಂಜು ಹಿಡಿದು ಹಿಂದೂ ಪರ ಘೋಷಣೆಗಳನ್ನು ಕೂಗಿ ಅಖಂಡ ಭಾರತದ ಸಂಕಲ್ಪ ಮಾಡಿದರು.
ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ನೇತೃತ್ವದಲ್ಲಿ ಸೂಕ್ತ ಭದ್ರತೆ ಕಲ್ಪಿಸಲಾಗಿತ್ತು.
ಸಭಾ ಕಾರ್ಯಕ್ರಮ :: ಭಾರತದ ಅಖಂಡತೆಗೆ ಧಕ್ಕೆ ಬಂದ ನೈಜ ಇತಿಹಾಸವನ್ನು ಭಾರತೀಯರು ತಿಳಿದುಕೊಳ್ಳಬೇಕೆಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ ಕರೆ ನೀಡಿದರು.
ಹಿಂದೂ ಜಾಗರಣಾ ವೇದಿಕೆ ವತಿಯಿಂದ ನಗರದ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಡೆದ ಪಂಜಿನ ಮೆರವಣಿಗೆಯ ನಂತರದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು.
ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಹ ಸಂಚಾಲಕ ರವಿರಾಜ್ ಶೆಟ್ಟಿ ಕಡಬ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ದೀರ್ಘ ಇತಿಹಾಸ ಇದೆ. ಭಾರತದ ಮೇಲೆ ದಂಡೆತ್ತಿ ಬಂದ ವಿದೇಶಗಳ ಹಲವು ರಾಜರನ್ನು ಎದುರಿಸಿ ದೇಶವನ್ನು ರಕ್ಷಿಸಿದ್ದಾರೆ. ಈ ನಿಟ್ಟಿನಲ್ಲಿ ಹಿಂದೂ ಸಮಾಜ ಒಗ್ಗಟ್ಟಾಗಬೇಕು. ಮುಂದಿನ ಪೀಳಿಗೆಗೆ ಭಯಮುಕ್ತ ದೇಶ ನಿರ್ಮಿಸುವುದು ನಮ್ಮ ಕರ್ತವ್ಯ ಎಂದು ಕರೆ ನೀಡಿದರು.
ರಾಷ್ಟ್ರಪತಿ ಸೇವಾ ಪ್ರಶಸ್ತಿ ಪುರಸ್ಕøತ, ಫೀ.ಮಾ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆ ತಾಲೂಕು ಸಂಯೋಜಕ ಮಗೇರನ ಕೆ.ಬೆಳ್ಯಪ್ಪ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಭೋಜೇಗೌಡ ಹಾಜರಿದ್ದರು.