ಮಡಿಕೇರಿ ಆ.12 : ಸರ್ಕಾರಗಳ ಯಾವುದೇ ಕಾನೂನು, ಕಾಯ್ದೆ ವರದಿಗಳು ಜನ ಪರವಾಗಿ ಇರಬೇಕೇ ಹೊರತು ವಿರುದ್ಧವಾಗಿ ಅಲ್ಲ. ಕಸ್ತೂರಿ ರಂಗನ್ ವರದಿಯ ಜಾರಿ ಮೂಲಕ ಕಾಡಂಚಿನಲ್ಲಿರುವ ಆದಿವಾಸಿಗಳನ್ನು, ಗ್ರಾಮೀಣ ಭಾಗದ ಜನರನ್ನು ಒಕ್ಕಲಬ್ಬಿಸುವ ತಂತ್ರ ನಡೆಯುತ್ತಿದೆಯೆಂದು ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ವತಿಯಿಂದ ಸ್ಥಳೀಯ ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ಆಯೋಜಿತ ‘ಕಸ್ತೂರಿ ರಂಗನ್’ ವರದಿ ಕುರಿತ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂಕಷ್ಟದಲ್ಲಿರುವವರನ್ನು, ಹಿಂದುಳಿದಿರುವ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ಸೇರ್ಪಡೆಗೊಳಿಸಬೇಕಾದ ಸರ್ಕಾರಗಳು ಜನರ ವಿರುದ್ಧವಾಗಿಯೇ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಪರಿಸರವನ್ನು ಉಳಿಸಿ ಬೆಳೆಸುವುದರ ಮೂಲಕ ರೈತರಿಗೂ ಪರಿಸರಕ್ಕೂ ಅವಿನಾಭಾವ ಸಂಬಂಧವಿದೆ. ರೈತರನ್ನು ಹೊರತುಪಡಿಸಿ ಪರಿಸರ ಇಲ್ಲ. ರೈತರಿಗೆ ತೊಂದರೆ ಆದರೆ ನಾವು ಸಹಿಸುವುದಿಲ್ಲ, ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ಕೊಡಗು ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗು ಜಿಲ್ಲೆಯ ಗ್ರಾಮೀಣ ಭಾಗದ ರೈತರು, ಕಾರ್ಮಿಕರು, ಬೆಳೆಗಾರರು ಕಾಡು ಪ್ರಾಣಿಗಳ ಹಾವಳಿ ನಡುವೆ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದು, ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ.ಕೊಡಗಿನ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರಗಳು ವಿಫಲವಾಗಿದೆ. ಸಣ್ಣ ಪ್ರಮಾಣದ ಭೂಮಿಯನ್ನು ಹೊಂದಿ ಕೃಷಿ ಮಾಡಿ ಜೀವನ ನಡೆಸುವ ರೈತರ ಮೇಲೆ ಅವೈಜ್ಞಾನಿಕ ನೀತಿಗಳನ್ನು ತಂದು 55 ಗ್ರಾಮಗಳನ್ನು ‘ಬಫರ್ ಝೋೀನ್’ ಪಟ್ಟಿಗೆ ಸೇರಿಸಲಾಗಿದ್ದು ಇದನ್ನ ಕೈಬಿಡಬೇಕೆಂದು ಒತ್ತಾಯಿಸಿದರು.
ತಾಲ್ಲೂಕಿನ ರೈತರು, ಕಾರ್ಮಿಕರು, ಸಾರ್ವಜನಿಕರು ಕಸ್ತೂರಿರಂಗನ್ ವರದಿಯ ಸಾಧಕ ಬಾಧಕಗಳ ಬಗ್ಗೆ ರೈತ ಸಂಘದೊಂದಿಗೆ ಚರ್ಚಿಸಿದ್ದಾರೆಂದು ತಿಳಿಸಿ, ಜಿಲ್ಲೆಗೆ ಯಾವುದೇ ಯೋಜನೆಗಳನ್ನು ತರುವ ಮುನ್ನ ಸ್ಥಳೀಯರೊಂದಿಗೆ ಚರ್ಚಿಸಬೇಕಾಗಿದ್ದರು ಏಕಾಏಕಿ ಕಾನೂನುಗಳನ್ನು ಜಾರಿಗೆ ತಂದು ರೈತರ ಮೇಲೆ ಹೇರಲು ಮುಂದಾಗಿರುವುದು ಸರಿಯಾದ ಕ್ರಮವಲ್ಲವೆಂದರು.
ಕಸ್ತೂರಿ ರಂಗನ್ ವರದಿಯ ಸಾಧಕ ಬಾದಕಗಳ ಕುರಿತು ಚರ್ಚಿಸಲಾಗಿದ್ದು, ಜಿಲ್ಲೆಯ ಜನರನ್ನು ಒಗ್ಗೂಡಿಸಿ ಜನರ ಹಿತದೃಷ್ಟಿಯಿಂದ ಬೃಹತ್ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಚಾರಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್, ಹೊಸಕೋಟೆ ಬಸವರಾಜು, ಅಮ್ಮತ್ತಿ ಹೋಬಳಿ ಅಧ್ಯಕ್ಷ ಪ್ರವೀಣ್ ಬೋಪಯ್ಯ, ಸಿದ್ದಾಪುರ ವಲಯ ಅಧ್ಯಕ್ಷ ಸುಜಯ್ ಬೋಪಯ್ಯ, ಸಬೀತ ಭೀಮಯ್ಯ ಸೇರಿದಂತೆ ಬೆಳೆಗಾರರು,ರೈತಸಂಘದ ಸದಸ್ಯರು, ಮುಖಂಡರು, ಸಾರ್ವಜನಿಕರು, ಸಂಘಸಂಸ್ಥೆಗಳು, ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.