ಮಡಿಕೇರಿ ಆ.12 : ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 4.37 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಪೆರಂಬಾಡಿ ಚೆಕ್ ಪೋಸ್ಟ್ ರಸ್ತೆ ಬಳಿ ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ದಾಳಿ ನಡೆಸಿದ ಪೊಲೀಸರು ಬೈಲುಕೊಪ್ಪ ನಿವಾಸಿಗಳಾದ ಬಿ.ಕೆ.ದಿನೇಶ್ (26), ಚಂದ್ರು (24) ಹಾಗೂ ಪೊನ್ನಂಪೇಟೆ ಬೇಗೂರು ಗ್ರಾಮದ ನಿವಾಸಿ ಎ.ಎ.ರಶೀದ್ (34) ಎಂಬುವವರನ್ನು ಮಾಲು ಸಹಿತ ಬಂಧಿಸಿದರು.
ಮಡಿಕೇರಿ ಉಪವಿಭಾಗದ ಡಿವೈಎಸ್ಪಿ ಎಂ.ಜಗದೀಶ್, ವಿರಾಜಪೇಟೆ ವೃತ್ತದ ಸಿಪಿಐ ಬಿ.ಎಸ್.ಶಿವರುದ್ರಪ್ಪ, ನಗರ ಠಾಣಾ ಪಿಎಸ್ಐ ರವೀಂದ್ರ, ಹಾಗೂ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು.
ಪೊಲೀಸರ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ. ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯ ಪ್ರಕರಣಗಳು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.










