ಸೋಮವಾರಪೇಟೆ ಆ.22 : ಶ್ರಾವಣ ಮಾಸದ ಪ್ರಥಮ ಹಬ್ಬವಾದ ನಾಗರಪಂಚಮಿಯನ್ನು ಪಟ್ಟಣದ ಸುತ್ತಮುತ್ತಲಿನ ವಿವಿಧ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸಮೀಪದ ತೊರೆನೂರು ಗ್ರಾ.ಪಂ ವ್ಯಾಪ್ತಿಯ ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀಮಂಜುನಾಥಸ್ವಾಮಿ ಮತ್ತು ನವನಾಗನಾಥಸ್ವಾಮಿ ದೇವಾಲಯದಲ್ಲಿ ನಾಗರಪಂಚಮಿಯನ್ನು ಆಚರಿಸಲಾಯಿತು.
ಮುಂಜಾನೆ ಗಣಪತಿಹೋಮದೊಂದಿಗೆ ಆರಂಭವಾದ ಪೂಜಾ ಕೈಂಕರ್ಯಗಳು ಮಧ್ಯಾಹ್ನ ಸಂಪನ್ನಗೊಂಡಿತು.
ನಾಗದೇವರ ಸನ್ನಿಧಿಯಲ್ಲಿ ನವನಾಗನಾಥನಿಗೆ ಜಲಾಭಿಷೇಕ, ಹಾಲಿನ ಅಭಿಷೇಕ, ಎಳನೀರು ಅಭಿಷೇಕ, ಪಂಚಾಮೃತ ಅಭಿಷೇಕ, ತಂಬಿಲ ಸೇವೆಯೊಂದಿಗೆ ಪೂಜೆ ಸಲ್ಲಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿತು.
ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.












